ಗಲಭೆ ಪೀಡಿತ ಶಿವಮೊಗ್ಗ ನಗರದಲ್ಲಿ ಶುಕ್ರವಾರವೂ ಕೂಡ ಮುನ್ನೆಚ್ಚರಿಕೆ ಅಂಗವಾಗಿ ಕರ್ಫ್ಯೂ ಅನ್ನು ಜಾರಿಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ಕೂಡ ರಜೆ ಸಾರಲಾಗಿತ್ತು.
ಶಿವಮೊಗ್ಗ ನಗರ ಈಗ ಶಾಂತಿಯತ್ತ ಮರಳುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದೂ ಕೂಡ ಕರ್ಫ್ಯೂ ಮುಂದುವರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಗಲಭೆ ಸಂಬಂಧ ನೂರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಸಂಬಂಧ 24ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದೆ. ಇಂದು ಮುಂಜಾನೆ 5ರಿಂದ 11ಗಂಟೆಯವರೆಗೆ ಕರ್ಫ್ಯೂ ಅನ್ನು ಸಡಿಲಿಕೆ ಮಾಡಲಾಗಿತ್ತು.
ಗುರುವಾರ ಸಣ್ಣ-ಪುಟ್ಟ ಕಲ್ಲು ತೂರಾಟದಂತಹ ಘಟನೆಗಳು ನಡೆದಿದ್ದು, ಶುಕ್ರವಾರ ನಗರ ಸಹಜ ಸ್ಥಿತಿಗೆ ಮರಳಿತ್ತು. ನಗರದ ಗಲಭೆ ಪೀಡಿತ ಪ್ರದೇಶಗಳಾದ ಹಮೀರ್ ಅಹ್ಮದ್ ವೃತ್ತ, ಲಷ್ಕರ್ ಮೊಹಲ್ಲಾ, ಟಿಪ್ಪುಸುಲ್ತಾನ್ ವೃತ್ತ, ಎಂ.ಕೆ.ಕೆ.ರಸ್ತೆ, ಗಾಂಧಿಬಜಾರ್, ಗೋಪಿವೃತ್ತ, ಗಾರ್ಡನ್ ಏರಿಯಾ, ಸವಾಯಿ ಪಾಳ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.