ಬಜೆಟ್: ಸಾಹಿತಿಗಳಿಗೆ ಫೆಲೋಶಿಪ್-ಕನ್ನಡ ಅಭಿವೃದ್ಧಿಗೆ 50ಕೋಟಿ
ಬೆಂಗಳೂರು, ಶುಕ್ರವಾರ, 5 ಮಾರ್ಚ್ 2010( 17:58 IST )
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸರ್ಕಾರ ಬಜೆಟ್‌ನಲ್ಲಿ 50ಕೋಟಿ ರೂ.ಒದಗಿಸಿದೆ.
ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸ್ತ್ರೀಯ ಸ್ಥಾನಮಾನ ದೊರೆತ ಸಂಬಂಧ ಕೇಂದ್ರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಾರಂಪರಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಶಿವಮೊಗ್ಗದಲ್ಲಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ 20ಕೋಟಿ ರೂ.ನೀಡಲಾಗುವುದು ಎಂದರು.
2010-11ರಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು 10ಕೋಟಿ ರೂ., ಗದಗದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ 3ಕೋಟಿ ರೂ., ಕುಮಾರವ್ಯಾಸನ ಜನ್ಮಸ್ಥಳವಾದ ಕೋಳವಾಡದಲ್ಲಿ ಸ್ಮಾರಕ ನಿರ್ಮಾಣಕ್ಕೆ 1ಕೋಟಿ ರೂ., ಕೊಪ್ಪಳ ಜಿಲ್ಲೆ ಆನೆಗೊಂಡ ಉತ್ಸವದ ವ್ಯವಸ್ಥೆಗೆ 2ಕೋಟಿ ರೂ.ಒದಗಿಸಲಾಗುವುದು ಎಂದು ತಿಳಿಸಿದರು.
ಸಾಹಿತಿಗಳಿಗೆ ಫೆಲೋಶಿಪ್: ಸಾಹಿತಿಗಳು ಮತ್ತು ಕಲಾವಿದರು ತಮ್ಮ ಕ್ಷೇತ್ರದಲ್ಲಿ ನಿರ್ದಿಷ್ಟ ವಿಷಯದ ಬಗ್ಗೆ ಸಂಶೋಧನೆ ಅಥವಾ ಅಧ್ಯಯನ ನಡೆಸಲು ಸಂಬಂಧಿಸಿದ ಅಕಾಡೆಮಿಗಳಿಂದ ತಲಾ ಐವರಿಗೆ ಪ್ರತಿವರ್ಷ ಫೆಲೋಶಿಪ್ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಘೋಷಿಸಿದರು.
ಹಿರಿಯ ಸಾಹಿತಿ ಕಲಾವಿದರಿಗೆ ಮಾಸಿಕ 10ಸಾವಿರ ರೂ.ಗಳನ್ನು ಒಂದು ವರ್ಷ ಈ ಫೆಲೋಶಿಪ್ ನೀಡಲಾಗುವುದು ಎಂದರು. ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಕೃತಿಗಳನ್ನು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಭಾಷಾಂತರ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತರಿಗೆ ಉಚಿತ ಪ್ರಯಾಣ: ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪ್ರಕಟಿಸಿದರು.