ಗೋಹತ್ಯೆ ನಿಷೇಧ ಕಾಯ್ದೆ-ಸಿಎಂ ಕುರ್ಚಿ ಉರುಳುತ್ತೆ: ಮುಸ್ಲಿಂ ಕೌನ್ಸಿಲ್
ಸಂಡೂರು, ಶನಿವಾರ, 6 ಮಾರ್ಚ್ 2010( 11:11 IST )
ರಾಜ್ಯ ಸರ್ಕಾರ ಒಂದು ಕೋಮುವನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋ ಹತ್ಯೆ ನಿಷೇಧಕ್ಕೆ ಮುಂದಾದರೆ ಅಲ್ಪಸಂಖ್ಯಾತರು ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ. ಅಲ್ಲದೇ ಕಾನೂನು ಸುವ್ಯವಸ್ಥೆ ಹದಗೆಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಪದತ್ಯಾಗ ಮಾಡುವ ಪರಿಸ್ಥಿತಿ ಎದುರಗಾಬಹುದು ಎಂದು ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯಾಧ್ಯಕ್ಷ ಬಶೀರ್ ಅಹಮ್ಮದ್ ಎಚ್ಚರಿಕೆ ನೀಡಿದ್ದಾರೆ.
ಕೇವಲ ಮುಸ್ಲಿಮರು ಮಾತ್ರ ಗೋ ಮಾಂಸ ತಿನ್ನುತ್ತಾರೆ ಎನ್ನುವ ಭ್ರಮೆ ತಪ್ಪು, ಯಾಕೆಂದರೆ ಹಿಂದೂಗಳು ಮಾಂಸ ತಿನ್ನುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ಕೋಮುವನ್ನು ಗುರಿಯಾಗಿಸಿಕೊಂಡು ಇಂತಹ ಕಾನೂನು ಜಾರಿ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಗೆ ರಾಜ್ಯ ಸರ್ಕಾರ ಮುಂದಾಗಬಾರದು ಎಂದು ಮನವಿ ಮಾಡಿಕೊಂಡರು. ಒಂದು ವೇಳೆ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ವಿರೋಧ ಲೆಕ್ಕಿಸದೆ ಕಾಯ್ದೆ ಜಾರಿಗೊಳಿಸಿದರೆ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಗುಡುಗಿದ್ದಾರೆ.