ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಶುಕ್ರವಾರದಿಂದ ಶನಿವಾರದವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಆರ್.ಇನ್‌ಫೆಂಟ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಘಟನೆ ವಿವರ: ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಪೈಗಂಬರ ವಿರುದ್ಧ ಲೇಖನದ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅಂಜುಮನ್ ಎ ಇಸ್ಲಾಂ ಪದಾಧಿಕಾರಿಗಳು ನಿರ್ಧರಿಸಿದ್ದರು. ಆದರೆ ಇದಕ್ಕೆ ಹಲವು ಯುವಕರ ಗುಂಪು ಮನವಿ ನೀಡುವ ಮೊದಲು ಪ್ರತಿಭಟನಾ ಮೆರವಣಿಗೆ ನಡೆಸುವಂತೆ ಪಟ್ಟು ಹಿಡಿದಾಗ ಪರಿಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಧಿಕಾರಿ ದರ್ಪಣ ಜೈನ್ ಹಳೇ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ್ದರು.
ತದ ನಂತರ ಗುರುವಾರ ರಾತ್ರಿ ಕಮರಿಪೇಟೆ ಬಳಿಯ ಖಬರಸ್ತಾನದ ಆವರಣ ಗೋಡೆಯಲ್ಲಿ ಮುಸಲ್ಮಾನರ ಭಾವನೆಗೆ ಧಕ್ಕೆ ತರುವಂತಹ ಬರೆದರೂ ಅಂಜುಮನ್ ಮುಖಂಡರು ಕ್ರಮಕ್ಕೆ ಆಗ್ರಹಿಸದಿರುವುದು ಖಂಡನೀಯ ಎಂದು ಒಂದು ಗುಂಪು ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಕರ್ಫ್ಯೂ ಜಾರಿಗೊಳಿಸಲಾಯಿತು.
ಕರ್ಫ್ಯೂ ನಡುವೆ ಪಾಲಿಕೆ ಮೇಯರ್ ಚುನಾವಣೆ: ಕರ್ಫ್ಯೂ ನಡುವೆಯೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ -ಉಪಮೇಯರ್ ಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ಪಾಲಿಕೆಯ ಮೇಯರ್ ಚುನಾವಣೆಯ ಜಿದ್ದಾಜಿದ್ದಿಯಲ್ಲಿ ಬಿಜೆಪಿಯ ವೆಂಕಟೇಶ್ ಮೇಸ್ತ್ರಿ ಮೇಯರ್ ಆಗಿ ಹಾಗೂ ಭಾರತಿ ಪಾಟೀಲ್ ಉಪ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ. ಪ್ರತಿಸ್ಪರ್ಧಿಯಾಗಿ ಸ್ಪರ್ಧಾ ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲನ್ನನುಭವಿಸಿದ್ದಾರೆ.