ರಾಜ್ಯ ಸರ್ಕಾರ ಶುಕ್ರವಾರ ಮಂಡಿಸಿದ್ದ ಮುಂಗಡ ಪತ್ರದಲ್ಲಿ ಮಠಗಳಿಗೆ ಹೆಚ್ಚಿನ ಅನುದಾನ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಎಚ್.ವಿಶ್ವನಾಥ್, ಮಠಗಳ ಆಸ್ತಿ ಬಹಿರಂಗಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿಜಕ್ಕೂ ರೈತಪರವಾದ ಬಜೆಟ್ ಅಲ್ಲ. ಅಲ್ಲದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಠಮಾನ್ಯಗಳಿಗೆ ಅನುದಾನ ನೀಡುವ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಏನೋ ಪುಣ್ಯ...ರಾಸಲೀಲೆ ಪ್ರಕರಣದಲ್ಲಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಸಿಗದಿರುತ್ತಿದ್ದರೆ, ಆತನಿಗೂ ಮುಖ್ಯಮಂತ್ರಿಗಳು 2ಕೋಟಿ ರೂಪಾಯಿ ನೀಡುತ್ತಿದ್ದರು ಎಂದು ವ್ಯಂಗ್ಯವಾಡಿದರು. ಮಠಗಳಿಗೆ ಹಣ ನೀಡುವ ಮೂಲಕ ಖಜಾನೆ ದುಡ್ಡು ಬೇಕಾಬಿಟ್ಟಿ ಖರ್ಚಾಗುತ್ತಿದೆ ಎಂದು ದೂರಿದರು.
ಸರ್ಕಾರ ಮತ್ತು ಸಮಾಜದಿಂದ ಮಠಗಳು ಪಡೆಯುವ ವಂತಿಗೆಯ ಲೆಕ್ಕಚಾರ ಪಾರದರ್ಶಕವಾಗಿರಬೇಕು. ಮಠಗಳು ಆಸ್ತಿ ವಿವರವನ್ನು ಬಹಿರಂಗಪಡಿಸಬೇಕು. ಮಠಗಳಲ್ಲಿನ ಲೆಕ್ಕಚಾರ ಪಾರದರ್ಶಕವಾಗಿರಬೇಕು ಎಂದರು.