ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೈಸ್ ವಿರುದ್ಧದ ಹೋರಾಟ ಬರೇ ನಾಟಕ ಎಂದು ಕಿಡಿಕಾರಿರುವ ನೈಸ್ ಕಂಪನಿಯ ಮುಖ್ಯಸ್ಥ ಅಶೋಕ್ ಖೇಣಿ, ನಟನೆಯಲ್ಲಿ ಗೌಡರಿಗೆ ಆಸ್ಕರ್ ಪ್ರಶಸ್ತಿ ಖಚಿತ ಎಂದು ವ್ಯಂಗ್ಯವಾಡಿದ್ದಾರೆ.
ನೈಸ್ ಕಂಪನಿಗೆ ಭೂಮಿ ನೀಡಿಕೆ ವಿವಾದ ಕುರಿತಂತೆ ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೌಡರಿಗೆ ದೇವರೇ ಬುದ್ಧಿ ಕೊಡಬೇಕು. ಅಭಿವೃದ್ಧಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಗೌಡರು ಅನಾವಶ್ಯಕವಾಗಿ ರೈತರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯುದ್ದಕ್ಕೂ ಗೌಡರು ಹಾಗೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಖೇಣಿ, ನೈಸ್ ಯೋಜನೆಯಲ್ಲಿ 30ಸಾವಿರ ಕೋಟಿ ರೂಪಾಯಿ ಬೆಲೆಯ ಭೂ ಕಬಳಿಕೆಯನ್ನು ಗೌಡರು ಸಾಬೀತುಪಡಿಸಿದ್ದಲ್ಲಿ ತಲೆದಂಡಕ್ಕೆ ಸಿದ್ದ ಎಂದು ಸವಾಲು ಹಾಕಿದ್ದಾರೆ. ವಿವಾದ ಕೋರ್ಟ್‌ನಲ್ಲಿ ಇದ್ದಿರುವುದರಿಂದ ಇಷ್ಟು ದಿನ ಮಾಧ್ಯಮಗಳಿಂದ ದೂರವಿದ್ದೆ, ಇದೀಗ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ವಿವಾದದ ಕುರಿತು ವಿವರಣೆ ನೀಡುತ್ತಿದ್ದೇನೆ.
ಸ್ವಾರ್ಥ ರಾಜಕಾರಣ ಮಾಡುತ್ತಿರುವ ಗೌಡರು ನೈಸ್ ವಿರುದ್ಧ ಪ್ರತಿಭಟನೆ ನಡೆಸುವಂತೆ ರೈತರಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಈಗಾಗಲೇ ಹಲವು ಪ್ರಕರಣಗಳಲ್ಲಿ ಜಯ ನಮ್ಮ ಪಾಲಿಗೆ ಆಗಿದೆ. ಯೋಜನೆ ಬಗ್ಗೆ ಎಲ್ಲಾ ದಾಖಲಾತಿ ನಮ್ಮ ಬಳಿಯೂ ಇದೆ ಎಂದರು.
ಗೌಡರು ಹೋರಾಟ ಮಾಡಲಿ ಅವರ ಗೊಡ್ಡು ಬೆದರಿಕೆಗಳಿಗೆಲ್ಲಾ ಬೆದರುವ ಪ್ರಶ್ನೆಯೇ ಇಲ್ಲ, ನಾವು ಕೂಡ ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿ ಗುಡುಗಿದರು.
ನೈಸ್ ಯೋಜನೆಗಾಗಿ ರೈತರ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರೈತರಿಗೆ ಬಿಡಿಎಗಿಂತ ಹೆಚ್ಚಿನ ಬೆಲೆ ನೀಡಿ ಭೂಮಿ ಖರೀದಿಸಲಾಗಿದೆ ಎಂದರು. ಹಾಗಾಗಿ ಗೌಡರು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಪ್ರವೃತ್ತಿ ನಿಲ್ಲಿಸಿ, ಅಭಿವೃದ್ದಿ ಕಾರ್ಯ ಮಾಡುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೌಡರು ಸಹಕಾರ ನೀಡಲಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.