ಶುಕ್ರವಾರ ಮಂಡಿಸಿದ್ದ ಪ್ರಸಕ್ತ ಸಾಲಿನ ಬಜೆಟ್ ಕುರಿತು ಎಲ್ಲ ವರ್ಗದ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ಸಮತೋಲನದ ಬಜೆಟ್ ಆಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಘೋಷಿಸಿರುವ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಏಪ್ರಿಲ್ 1ರಿಂದಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಸಂಪನ್ಮೂಲ ಕ್ರೋಢಿಕರಣ ಮಾಡಿಕೊಳ್ಳುವುದಕ್ಕೆ ಬಜೆಟ್‌ನಲ್ಲಿ ಸ್ಪಷ್ಟತೆ ಇಲ್ಲ ಎಂಬ ವಿಪಕ್ಷಗಳ ಟೀಕೆಯನ್ನು ತಳ್ಳಿ ಹಾಕಿದ ಅವರು ಸಂಪನ್ಮೂಲ ಕ್ರೋಢಿಕರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಮರು ಸ್ವಾಧೀನ ಮಾಡಿಕೊಂಡಿದ್ದು, ಅದನ್ನು ಮಾರಾಟ ಮಾಡಿದರೆ ಸಾವಿರಾರು ಕೋಟಿ ರೂಪಾಯಿ ಬರಲಿದೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ನೆರವು ಮತ್ತಿತರ ಮೂಲಗಳಿಂದ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.