ಬಜೆಟ್‌ನಲ್ಲಿ ಬೆಳಗಾವಿ ಅಭಿವೃದ್ದಿಗೆ ಆದ್ಯತೆ ಇಲ್ಲ: ಕನ್ನಡ ಸಂಘಟನೆ
ಬೆಳಗಾವಿ, ಶನಿವಾರ, 6 ಮಾರ್ಚ್ 2010( 19:06 IST )
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿದ ಬಜೆಟ್‌ನಲ್ಲಿ ಬೆಳಗಾವಿಯ ಅಭಿವೃದ್ದಿಗೆ ಆದ್ಯತೆ ನೀಡದ ಕ್ರಮವನ್ನು ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಿತ್ತೂರ ಚೆನ್ನಮ್ಮ ಸ್ನಾತಕೋತ್ತರ ಕೇಂದ್ರಕ್ಕೆ ಸ್ವತಂತ್ರ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವ ಬಹು ನಿರೀಕ್ಷಿತ ಬೇಡಿಕೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸದಿರುವುದಕ್ಕೆ ಆಕ್ರೋಶಗೊಂಡಿರುವ ಕನ್ನಡ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣಿಧಣಿಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ಕೃಷ್ಣದೇವರಾಯರ ಹೆಸರಿಡುವುದಕ್ಕಾಗಿಯೇ ಬಳ್ಳಾರಿಗೆ ವಿಶ್ವವಿದ್ಯಾಲಯ ಮಂಜೂರು ಮಾಡಿದ್ದಾರೆ. ಆದರೆ ಗಡಿಭಾಗದ ಜನರ ಬಹುದಿನಗಳ ಬೇಡಿಕೆ ಸ್ವತಂತ್ರ ವಿಶ್ವವಿದ್ಯಾಲಯ ಬೇಡಿಕೆಯಾಗಿಯೇ ಉಳಿದಿದೆ ಎಂದು ಪ್ರತಿಭಟನಾಕಾರರು ಅಸಮಧಾನ ವ್ಯಕ್ತಪಡಿಸಿದರು.
ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಮೂಲ ಕಾರಣ. ಈಲ್ಲೆಯ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರದೇ ಇರುವುದರಿಂದ ಈ ಸಲದ ಬಜೆಟ್‌ನಲ್ಲಿ ಸ್ವತಂತ್ರ ವಿಶ್ವವಿದ್ಯಾಲಯದ ಘೋಷಣೆಗೆ ಹಿನ್ನೆಡೆಯುಂಟಾಗಿದೆ ಎಂದುಪ್ರತಿಭಟನಾಕಾರರು ಆರೋಪಿಸಿದರು.