ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲೆ ನೆಟ್ಟಗಿಲ್ಲ. ಅವರ ತಲೆಯ ನಟ್ಟು, ಬೋಲ್ಟ್ ಲೂಸ್ ಆಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆಗೆ ಬಳಸುವ ಕಲ್ಲಿದ್ದಲನ್ನು ಖರೀದಿಸುವ ಹಗರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ 300ಕೋಟಿ ರೂಪಾಯಿ ಲಪಟಾಯಿಸಿದ್ದಾರೆಂದು ಆರೋಪಿಸಿರುವುದನ್ನು ನೋಡಿದರೆ ಅವರಿಗೆ ತಲೆ ಸರಿ ಇಲ್ಲ ಎಂದು ಗೊತ್ತಾಗುತ್ತೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನರಲ್ಲಿ ಹಾಗೂ ವಿಧಾನಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡಿ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಕಲ್ಲಿದ್ದಲ್ಲಿನ ಖರೀದಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿರುವ ಬಗ್ಗೆ ತಮ್ಮ ಕುಟುಂಬ ಶಾಮೀಲಾಗಿರುವುದನ್ನು ಸಾಬೀತು ಪಡಿಸಬೇಕೆಂದು ಸವಾಲು ಹಾಕಿದರು. ರಾಜ್ಯದ ಅಭಿವೃದ್ಧಿಗೆ ವಿರೋಧ ಪಕ್ಷದವರು ಸಹಕಾರ ನೀಡುತ್ತಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸರಿಯಲ್ಲ. ಇವರು ಬೊಬ್ಬೆ ಹೊಡೆಯುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.