ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಶನಿದೇವ ಹೆಗಲೇರಿದ್ದು, ರೈತ ವಿರೋಧಿ ನೀತಿಯನ್ನು ಮುಂದುವರಿಸಿದರೆ ಜನಸಾಮಾನ್ಯರೇ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ನಗರದ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಶನಿವಾರ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಮುಖ್ಯಮಂತ್ರಿ ತಾನು ಎಂದು ಬರೇ ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ ಎಂದು ಚುಚ್ಚಿದ ಅವರು, ನಗರದ ಹೊರವಲಯದಲ್ಲಿ ರೈತರ ಸಾವಿರಾರು ಎಕರೆ ಭೂಮಿ ಸ್ವಾಧೀನ ಮಾಡಿಕೊಂಡು ರೈತ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಭೂಸ್ವಾಧೀನ ಪ್ರಕ್ರಿಯೆ ಹೀಗೆ ಮುಂದುವರಿದರೆ ರೈತರ ದಂಗೆ ಯಡಿಯೂರಪ್ಪ ಅವರ ಆಡಳಿತವನ್ನು ಕಿತ್ತೊಗೆಯಲಿದ್ದಾರೆ ಎಂದು ಗುಡುಗಿದರು. ಆ ನಿಟ್ಟಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ರಾಜ್ಯ ಸರ್ಕಾರ ನಿಲ್ಲಿಸಲಿ ಎಂದು ಹೇಳಿದರು.