ಗೋ ಹತ್ಯೆ ನಿಷೇಧದ ವಿರುದ್ಧ ದಲಿತರ ಬಳಕೆ ಸರಿಯಲ್ಲ: ಪೇಜಾವರಶ್ರೀ
ಬೆಂಗಳೂರು, ಭಾನುವಾರ, 7 ಮಾರ್ಚ್ 2010( 12:08 IST )
ದಲಿತರನ್ನು ಮುಂದಿಟ್ಟುಕೊಂಡು ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಪೇಜಾವರಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಷಯವನ್ನು ಮುಂದಿಟ್ಟುಕೊಂಡು ದಲಿತರಿಗೆ ಅನ್ಯಾಯ ಮಾಡಲಾಗಿದೆ. ಆದರೆ ಈಗ ಗೋಹತ್ಯೆ ನಿಷೇಧ ವಿಷಯದಲ್ಲಿ ದಲಿತರನ್ನು ಮುಂದಿಟ್ಟುಕೊಂಡಿರುವುದು ಸರಿಯಲ್ಲ. ಈ ಬಗ್ಗೆ ದಲಿತ ಸಮುದಾಯ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಈ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಹಾಗೂ ಗೋ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಮಾರ್ಚ್ 11, 14 ಮತ್ತು 22ರಂದು ಮೂರು ಸಮಾವೇಶಗಳನ್ನು ನಡೆಸಲು ಯೋಜಿಸಿದ್ದು, ಈ ಮೂಲಕ ಸರ್ಕಾರದ ಮೇಲೆ ಕಾನೂನು ಜಾರಿಗೆ ತರುವಂತೆ ಒತ್ತಡ ಹೇರಲಾಗುವುದು ಎಂದರು.
ಇದೇ ವೇಳೆ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮೀಜಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಯವರ ಲೈಂಗಿಕ ಹಗರಣದ ಕುರಿತು ಸತ್ಯಾಂಶ ಬೆಳಕಿಗೆ ಬರಬೇಕು. ಮೊದಲು ಈ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಬೇಕು ಎಂದು ಹೇಳಿದರು.