ವಿದೇಶ ಸಂಸ್ಕೃತಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಿಂದ ದೇಶದ ಮಾಧ್ಯಮಗಳ ಮೂಲಕ ಬಿಂಬಿತವಾಗುವ ನಿಲುವಿನ ವಿರುದ್ಧ ನೈಜಾಂಶವನ್ನು ಜನತೆ ಮುಂದೆ ಇಡುವ ನಿಟ್ಟಿನಲ್ಲಿ ಶ್ರೀರಾಮಸೇನೆಯ ವೆಬ್‌ಸೈಟ್‌ಗೆ ಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಶ್ರೀರಾಮಸೇನಾ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂಗಳಲ್ಲಿ ಸ್ವಾಮೀಜಿಗಳನ್ನು ದೇವರಿಗೆ ಸಮನಾಗಿ ಕಾಣಲಾಗುತ್ತಿದೆ. ಆ ನಂಬಿಕೆಗೆ ಮಸಿ ಬಳಿಯುವ ನಿಟ್ಟಿನಲ್ಲಿ ನಿತ್ಯಾನಂದ ಸ್ವಾಮೀಜಿಗಳ ಬಗ್ಗೆ ಅಪ್ರಚಾರ ಕೈಗೊಳ್ಳಲಾಗಿದೆ ಎಂದು ದೂರಿದರು.
ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿ ದೇಶ ಬಿಟ್ಟು ಹೋಗಿರುವ ಕಲಾವಿದ ಎಂ.ಎಫ್ ಹುಸೇನ್ ಅವರು ಕತಾರ್‌ನಲ್ಲಿ ನಾಗರಿಕತ್ವ ಸ್ವೀಕರಿಸಿದ್ದು ಹಿಂದೂಗಳ ವಿಜಯದ ಸಂಕೇತ ಎಂದು ತಿಳಿಸಿದರು.
ಇದೇ ವೇಳೆ ಪತ್ರಿಕೆಯೊಂದರಲ್ಲಿನ ಲೇಖನದಿಂದ ನಡೆದ ಗಲಭೆ ಬಗ್ಗೆ ಮಾತನಾಡಿದ ಅವರು, ಇಸ್ಲಾಂನಲ್ಲಿ ಬುರ್ಖಾ ಬಗ್ಗೆ ಅವೈಜ್ಞಾನಿಕವಾಗಿ ಹೇಳಿರುವ ಅಂಶವನ್ನು ತಸ್ಲೀಮಾ ನಸ್ರಿನ್ ಬರೆದಿದ್ದಕ್ಕಾಗಿ ಎಷ್ಟು ಗಲಭೆಗಳಾದವು. ಅದೇ ರೀತಿ ಹಿಂದೂಗಳು ಗಲಭೆ ನಡೆಸುತ್ತಿದ್ದರೆ ಇಂದು ಸದನವೇ ನಡೆಯುತ್ತಿರಲಿಲ್ಲ. ಒಂದು ವೇಳೆ ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಶ್ರೀರಾಮ ಸೇನೆ ಆಶ್ರಯ ನೀಡುತ್ತದೆ ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ಅಡ್ವೊಕೇಟ್ ಜನರಲ್ ದೊರೈರಾಜ್, ಚಿತ್ರನಟ ಕೀರ್ತಿ ಧರ್ಮರಾಜ್, ಬಸವಾನಂದ ಸ್ವಾಮೀಜಿ, ಈಶ್ವರ್ ಸಿಂಗ್ ಠಾಕೂರ್, ಬಸವರಾಜ್ ಸಿದ್ದಲಿಂಗಪ್ಪನವರ್, ವಸಂತಕುಮಾರ್ ಭವಾನಿ ಹಾಜರಿದ್ದರು.