ನೈಸ್ ಮುಖ್ಯಸ್ಥ ಅಶೋಕ್ ಖೇಣಿ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ತಿರಸ್ಕರಿಸಿರುವುದಾಗಿ ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಇಂತಹ ಆರೋಪಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದಿದ್ದಾರೆ.
ವಂಚನೆಯಿಂದಲೇ ಆರಂಭವಾಗಿ, ವಂಚನೆಯಿಂದಲೇ ಅಂತ್ಯವಾಗುವವರ ಬಗ್ಗೆ ತಾವು ಮಾತನಾಡುವುದಿಲ್ಲ. ಅವರ ಆರೋಪಗಳಿಗೆ ಪ್ರತಿಕ್ರಿಯಿಸುವುದೂ ಇಲ್ಲ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ನೈಸ್ ಯೋಜನೆ ಬಗ್ಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನೈಸ್ ಯೋಜನೆಯಲ್ಲಿ 2,400ಎಕರೆ ಜಮೀನನ್ನು ಡಿನೋಟಿಫೈ ಮಾಡಲು ದೇವೇಗೌಡರು ಸೂಚಿಸಿದ್ದರು ಎನ್ನುವ ಖೇಣಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಷ್ಟು ವರ್ಷಗಳ ಕಾಲ ಖೇಣಿ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
ಅಭಿವೃದ್ಧಿಗೆ ದೇವೇಗೌಡ ಯಾವತ್ತೂ ವಿರೋಧಿಯಲ್ಲ, ಅನಗತ್ಯವಾಗಿ ಭೂಮಿ ಹೊಡೆಯುವುದಕ್ಕಷ್ಟೇ ತಮ್ಮ ವಿರೋಧ ಎಂದರು. ಯೋಜನೆಗೆ ಭೂಮಿ ಅಗತ್ಯ ಎನಿಸಿದರೆ ತೆಗೆದುಕೊಳ್ಳಲಿ ಅದು ಬಿಟ್ಟು ರಿಯಲ್ ಎಸ್ಟೇಟ್ ದಂಧೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.
ಭೂಸ್ವಾಧೀನದ ಬಗ್ಗೆ ಖೇಣಿ ಆರೋಪಗಳಿಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ. ದೆಹಲಿಯಿಂದ ಮಾರ್ಚ್ 15ರಂದು ವಾಪಸ್ ಆದ ನಂತರ ಈ ಎಲ್ಲಾ ವಿಚಾರಗಳಿಗೆ ಉತ್ತರ ನೀಡುತ್ತೇನೆ ಎಂದರು.