ರಾಜ್ಯಾದ್ಯಂತ ತೀವ್ರ ವಿವಾದ ಹುಟ್ಟು ಹಾಕಿದ್ದ ಪ್ರಿಯಕರನಿಂದ ವಂಚನೆಗೊಳಗಾಗಿ ಗರ್ಭಿಣಿಯಾಗಿದ್ದ ಪ್ರಿಯಾಂಕ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಿಯಾಂಕಳ ರಕ್ತ ಪರೀಕ್ಷೆ ನಡೆಸಿದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಡಿಎನ್‌ಎ ಪಾಸಿಟಿವ್ ಎಂದು ಬಹಿರಂಗವಾಗಿದೆ.
ಪ್ರಿಯಾಂಕ ಹಾಗೂ ಆನಂದನ ರಕ್ತ ಕಣಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಂತೆ 8ನೇ ಎಸಿಎಂಎಂ ನ್ಯಾಯಾಧೀಶರು ಆದೇಶ ನೀಡಿದ್ದರು. ಅದರಂತೆ ಪ್ರಯೋಗಾಲಯದ ಸಿಬ್ಬಂದಿ ಪರೀಕ್ಷೆಯ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಧೀಶರಿಗೆ ಸಲ್ಲಿಸಿದ್ದಾರೆ.
ಪ್ರಿಯಾಂಕಳ ಪ್ರೇಮ ಪ್ರಕರಣದ ವಿವಾದ ರಾಜ್ಯಾದ್ಯಂತ ತೀವ್ರ ವಿವಾದ ಹುಟ್ಟುಹಾಕಿತ್ತು. ಅಲ್ಲದೇ ಪ್ರಿಯಾಂಕಳನ್ನು ವಂಚಿಸಿದ್ದ ಆನಂದ ತಾನು ಪ್ರಿಯಾಂಕಳನ್ನು ವಂಚಿಸಿಯೇ ಇಲ್ಲ ಎಂದು ವಾದಿಸಿದ್ದ. ಈ ಸಂದರ್ಭದಲ್ಲಿ ಹಲವಾರು ಮಹಿಳಾ ಸಂಘಟನೆಗಳು ಪ್ರಿಯಾಂಕಳಿಗೆ ಬೆಂಬಲ ಸೂಚಿಸಿ ಹೋರಾಟ ನಡೆಸಿದ್ದವು.
ಆನಂದ್ ಈಗಾಗಲೇ ತಿರುಮಲ ಎಂಬಾಕೆಯೊಂದಿಗೆ ವಿವಾಹವಾಗಿದ್ದು, ಇದೀಗ ಕಾನೂನು ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಆ ನಿಟ್ಟಿನಲ್ಲಿ ಡಿಎನ್‌ಎ ವರದಿ ಪ್ರಿಯಾಂಕ ಪರವಾಗಿ ಬಂದಿದೆ. ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಪ್ರಿಯಾಂಕಳ ಭವಿಷ್ಯ ನಿರ್ಧಾರವಾಗಲಿದೆ.