ಭದ್ರತೆ ದೃಷ್ಟಿಯಿಂದ ನಿತ್ಯಾನಂದ ಸ್ವಾಮಿ ಅಜ್ಞಾತವಾಸ: ಸಚ್ಚಿದಾನಂದ
ಬೆಂಗಳೂರು, ಸೋಮವಾರ, 8 ಮಾರ್ಚ್ 2010( 17:34 IST )
ರಾಸಲೀಲೆ ಪ್ರಕರಣದ ನಂತರ ನಾಪತ್ತೆಯಾಗಿರುವ ನಿತ್ಯಾನಂದ ಸ್ವಾಮಿ ಅವರು ಭದ್ರತೆಯ ದೃಷ್ಟಿಯಿಂದ ಅಜ್ಞಾತವಾಸದಲ್ಲಿದ್ದು, ಇನ್ನೆರಡು ದಿನದಲ್ಲಿಯೇ ಸ್ವಾಮೀಜಿಯೇ ವಿಡಿಯೋ ಮೂಲಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದಾರೆ ಎಂದು ಸ್ವಾಮಿಯ ಶಿಷ್ಯ ನಿತ್ಯ ಸಚ್ಚಿದಾನಂದ ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ನಿತ್ಯಾನಂದ ಸ್ವಾಮೀಜಿಯ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಿಡದಿಯ ಧ್ಯಾನಾಶ್ರಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅವರು, ಸತ್ಯಾಂಶ ಹೊರ ಬರುವವರೆಗೆ ನಿತ್ಯಾನಂದ ಸ್ವಾಮಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಅವರೀಗ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡಿರುವುದಾಗಿ ವಿವರಿಸಿದ್ದಾರೆ.
ಅಲ್ಲದೇ, ಸ್ವಾಮೀಜಿಯ ಬಗ್ಗೆ ಕಾರು ಚಾಲಕ ಲೆನಿನ್ ಕರುಪ್ಪನ್ ಮಾಡಿರುವ ಆರೋಪದಲ್ಲಿ ಎಳ್ಳಷ್ಟು ಹುರುಳಿಲ್ಲ. ಇದು ಸ್ವಾಮೀಜಿಯ ತೇಜೋವಧೆಗೆ ಮಾಡಿದ ಸಂಚು ಎಂದು ದೂರಿದರು. ಮಠ ಮತ್ತು ಸ್ವಾಮೀಜಿಯ ಏಳಿಗೆ ಸಹಿಸಲಾಗದ ಕೆಲವರು ಆಧುನಿಕ ತಂತ್ರಜ್ಞಾನ ಬಳಸಿ ರಾಸಲೀಲೆಯ ವಿಡಿಯೋ ಬಹಿರಂಗಗೊಳಿಸಿರುವುದಾಗಿ ಹೇಳಿದರು.
ಈ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿರುವ ಸಚ್ಚಿದಾನಂದ ಸ್ವಾಮಿ, ರಾಸಲೀಲೆಯಲ್ಲಿ ಕಾಣಿಸಿಕೊಂಡಿದ್ದ ನಟಿ ರಂಜಿತಾ ಯೋಗ ಕಲಿಯಲು ಆಶ್ರಮಕ್ಕೆ ಬರುತ್ತಿದ್ದಳು ಎಂದರಾದರೂ ಕೂಡ, ಈಗ ಆಕೆ ಎಲ್ಲಿದ್ದಾಳೆಂಬ ಪ್ರಶ್ನೆಗೆ ಉತ್ತರ ನೀಡಲು ಅವರು ನಿರಾಕರಿಸಿದರು.
ಭಾನುವರಷ್ಟೇ ಇಂಟರ್‌ನೆಟ್‌ನಲ್ಲಿ ವಿಡಿಯೋ ಮೂಲಕ ರಾಸಲೀಲೆ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿ, ತಾನು ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಲಾಗಿದೆ ಎಂದು ದೂರಿದ್ದ. ಇದೀಗ ಸ್ವಾಮೀಜಿಯ ಸ್ಪಷ್ಟನೆಯ ಬೆನ್ನಲ್ಲೇ ಶಿಷ್ಯ ನಿತ್ಯ ಸಚ್ಚಿದಾನಂದ ಸ್ವಾಮಿ ಪರ ಸ್ಪಷ್ಟನೆ ನೀಡಿದ್ದಾರೆ.