ಚುನಾವಣೋತ್ತರ ಕಾಲದಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರ ರಚನೆಯಾಗುವ ಮೊದಲು, 'ನಮ್ಮದು ಯುಪಿಎಗೆ ಬೇಷರತ್ ಬೆಂಬಲ' ಎಂದು ಘೋಷಿಸಿದ್ದ ಮತ್ತು ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿದ್ದ ಜಾತ್ಯತೀತ ಜನತಾ ದಳ, ಇದೀಗ ಲಾಲೂ ಪ್ರಸಾದ್ ಯಾದವ್ - ಮುಲಾಯಂ ಸಿಂಗ್ ಯಾದವ್ ಬಣದತ್ತ ವಾಲಿಕೊಂಡಿದೆ. ಮಸೂದೆಯಲ್ಲಿ ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತ್ಯೇಕ ಕೋಟಾ ಕೊಟ್ಟರೆ ಮಾತ್ರ ಯುಪಿಎಗೆ ಬೆಂಬಲ ನೀಡುವುದಾಗಿ ಮೂವರು ಸದಸ್ಯರುಳ್ಳ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಘೋಷಿಸಿದ್ದಾರೆ.
ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ಇಲ್ಲದಿರುವುದು ಅತಿ ದೊಡ್ಡ ಹಿನ್ನಡೆ ಎಂದು ತಾನು, ಮಗ ಕುಮಾರ ಸ್ವಾಮಿ ಮತ್ತು ಚೆಲುವರಾಯ ಸ್ವಾಮಿ ಸಂಸದರಾಗಿರುವ ಜೆಡಿಎಸ್ ಮುಖ್ಯಸ್ಥರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನ ಮಾನ ನೀಡಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ ಮತ್ತು ಈ ವ್ಯವಸ್ಥೆಯು ಹಲವು ವರ್ಷಗಳಿಂದ ಯಾವುದೇ ಸಮಸ್ಯೆಗಳಿಲ್ಲದೆ ನಡೆದುಕೊಂಡುಬರುತ್ತಿದೆ ಎಂದು ದೇವೇಗೌಡರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತಾಪಿತ ಶಾಸನದಲ್ಲಿ ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನೀಡಿದರೆ ಮಾತ್ರವೇ ಮೂವರು ಸದಸ್ಯರುಳ್ಳ ಜೆಡಿಎಸ್, ಕೇಂದ್ರವನ್ನು ಬೆಂಬಲಿಸುತ್ತದೆ ಎಂದಿದ್ದಾರೆ.