ಕಾರ್ಲ್‌ಟನ್ ಟವರ್ಸ್ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದ 6ಮಂದಿಗೆ ಜಾಮೀನು ಹಾಗೂ ತಲೆಮರೆಸಿಕೊಂಡಿದ್ದ ಮೂರು ಮಂದಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ನಗರದ 3ನೇ ಹೆಚ್ಚುವರಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಂ.ಎನ್.ರಘುನಾಥ್ ಅವರು ಪ್ರಕರಣದ ವಿಚಾರಣೆ ನಡೆಸಿ, 6ಮಂದಿಗೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಇದರಲ್ಲಿ ಕಂಬಿಯ ಹಿಂದೆ ಇದ್ದ ದೀಪಕ್, ರಫೀಕ್ ಉರ್ ರೆಹಮಾನ್, ಬಂಡಾರಿ, ಶ್ಯಾಂ ಕೇದಾರ್, ಚೆನ್ನಯ್ಯ ಹಾಗೂ ಕೆಂಪೇಗೌಡಗೆ ಜಾಮೀನು ದೊರೆತಿದೆ.
ಅಲ್ಲದೇ ತಲೆಮರೆಸಿಕೊಂಡಿರುವ ಅನುಪಮ ಜೈನ್, ಮಂದಣ್ಣ ಮತ್ತು ಮದನ್‌ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಜಾಮೀನು ಪಡೆದಿರುವ ಆರೋಪಿತರು ಬೆಂಗಳೂರು ಬಿಟ್ಟು ಬೇರೆಡೆ ಹೋಗಬೇಕಾದಲ್ಲಿ ನ್ಯಾಯಾಲಯದ ಅನುಮತಿ ಪಡೆಯಬೇಕು. ಸಾಕ್ಷಿಗಳನ್ನು ಬೆದರಿಸಬಾರದು. ತನಿಖೆಗೆ ಸಹಕರಿಸುವಂತೆ ಮತ್ತು 50ಸಾವಿರ ರೂಪಾಯಿ ಮೌಲ್ಯದ ಬಾಂಡ್ ನೀಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.