ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಠ-ಮಾನ್ಯಗಳಿಗೆ ಹಣ ನೀಡುವ ಪರಿಪಾಠವನ್ನು ಮುಂದುವರಿಸಿರುವ ಕ್ರಮಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಠಗಳಿಗೆ 60ಕೋಟಿಗೂ ಹೆಚ್ಚು ಹಣ ನೀಡಿದ್ದು, ಅದರ ಲೆಕ್ಕವನ್ನು ಪರಿಶೋಧನೆ ಮಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ವಿಧಾನಮಂಡಲದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಠಮಾನ್ಯಗಳಿಗೆ ಬೊಕ್ಕಸದಿಂದ ಬೇಕಾಬಿಟ್ಟಿ ಹಣ ನೀಡುವ ಮೂಲಕ ಮುಖ್ಯಮಂತ್ರಿಗಳು ತಪ್ಪು ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಮಠಗಳಿಗೆ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಬರುತ್ತದೆ, ಅದು ಸಾಲದೆಂಬಂತೆ ತೆರಿಗೆದಾರರ ಹಣವನ್ನೂ ಕೂಡ ಮಠಗಳಿಗೆ ನೀಡಿದರೆ ಈ ರೀತಿ ಕೊಟ್ಟ ಹಣದ ಲೆಕ್ಕಚಾರ ಇಡುವವರು ಯಾರು ?ಕೊಟ್ಟ ಹಣ ಯಾವ ಉದ್ದೇಶಕ್ಕೆ ಬಳಕೆಯಾಗುತ್ತೆ ಎಂಬುದು ಹೇಗೆ ತಿಳಿಯಬೇಕು ಎಂದು ಪ್ರಶ್ನಿಸಿದರು.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ನಾನು ಎಂದು ಹೇಳಿಕೊಳ್ಳುತ್ತಲೇ ರೈತರನ್ನು ಯಡಿಯೂರಪ್ಪ ವಂಚಿಸುತ್ತಲೆ ಬಂದಿದ್ದಾರೆ. ರೈತರ ಸಂಕಷ್ಟಗಳಿಗೆ ನೆರವಾಗುವುದು ಬಿಟ್ಟು, ಮಠ-ಮಠಾಧೀಶರನ್ನು ಸಂತೃಪ್ತಗೊಳಿಸುವುದರಲ್ಲಿಯೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸುತ್ತಿದೆ ಎಂದು ಟೀಕಿಸಿದರು.