ನೈಸ್ ಕಂಪನಿಯ ಭೂ ಕಬಳಿಕೆಯನ್ನು ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿದ್ದ ಹೋರಾಟ ಇದೀಗ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ದೆಹಲಿ ಜಂತರ್ ಮಂತರ್‌ನಲ್ಲಿ ಬುಧವಾರ ರೈತರು ಪ್ರತಿಭಟನೆ ನಡೆಸುವ ಮೂಲಕ ನೈಸ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿದ್ದ ಹೋರಾಟವೀಗ ರಾಜಧಾನಿಗೆ ಶಿಫ್ಟ ಆಗಿದೆ. ಬುಧವಾರ ಜಂತರ್ ಮಂತರ್ ಸಮೀಪ ಸಾವಿರಾರು ರೈತರು ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನೈಸ್ ಕಂಪನಿಯ ಭೂಕಬಳಿಕೆಯ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಕೂಡ ಗೌಡರ ಹೋರಾಟಕ್ಕೆ ಬೆಂಬಲ ನೀಡಿರುವುದು ನೈಸ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲಬಂದಂತಾಗಿದೆ.
ನೈಸ್ ವ್ಯಾಪ್ತಿಯ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಇಂದು ಸಂಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಗೌಡರು ಈ ಸಂದರ್ಭದಲ್ಲಿ ಹೇಳಿದರು.
ನೈಸ್ ಯೋಜನೆಯ ಹೆಸರಿನಲ್ಲಿ ರೈತರ ಫಲವತ್ತಾದ ಜಮೀನನ್ನು ವಶಪಡಿಸಿಕೊಂಡು, ರಿಯಲ್ ಎಸ್ಟೇಟ್ ದಂಧ ನಡೆಸುವ ಹುನ್ನಾರ ಅಶೋಕ್ ಖೇಣಿಯದ್ದಾಗಿದೆ. ನಾವು ಇದಕ್ಕೆ ಖಂಡಿತಾ ಅವಕಾಶ ನೀಡುವುದಿಲ್ಲ. ಹಾಗಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.