ತೀವ್ರ ವಿವಾದ ಹುಟ್ಟು ಹಾಕಿರುವ ಹಂಪಿ ವಿವಿಯ ಭೂಮಿ ಪರಭಾರೆ ವಿರೋಧಿಸಿ ನಡೆಸುವ ಹೋರಾಟದ ನೇತೃತ್ವ ವಹಿಸಿಕೊಳ್ಳಲು ತಾವು ಸಿದ್ಧ ಎಂದು ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಘೋಷಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ರಾಜ್ಯ ಅಭಿವೃದ್ದಿಗೊಳಿಸುವ ಯೋಜನೆ ರೂಪಿಸಬೇಕೇ ಹೊರತು, ತನಗೆ ಸಂಬಂಧಿಸಿರದ ವಿಷಯಕ್ಕೆ ಕೈ ಹಾಕಿ ವಿವಾದವನ್ನು ಮತ್ತಷ್ಟು ಜಟಿಲಗೊಳಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಂಪಿ ವಿಶ್ವವಿದ್ಯಾಲಯದ 80 ಎಕೆರೆ ಭೂಮಿಯನ್ನು ಸರ್ಕಾರ ವಿಜಯನಗರ ಪುನಶ್ಚೇತನಕ್ಕೆ ನೀಡಿರುವುದರ ವಿಚಾರ ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆ ವಿರೋಧವಷ್ಟೇ ಪರ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದ್ದು, ಸಾಮಾನ್ಯ ಸೂತ್ರವಿಲ್ಲದೇ ಪ್ರಕರಣ ಕೊನೆಗೊಳ್ಳುವ ಲಕ್ಷಣಗಳೂ ಕಾಣುತ್ತಿಲ್ಲ.
ಹಂಪಿ ವಿಶ್ವವಿದ್ಯಾಲಯದ 80 ಎಕರೆ ಭೂಮಿಯನ್ನು ವಿಜಯನಗರ ಪುನಶ್ಚೇತನ ಟ್ರಸ್ಟ್‌ಗೆ ಪರಭಾರೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದರೂ ಈಗ ವಿವಾದ ತಣ್ಣಗಾಗುವ ಸೂಚನೆಗಳು ಕಂಡು ಬರುತ್ತಿಲ್ಲ.
ರಾಜ್ಯಪಾಲರ ಕ್ರಮವನ್ನು ವಿವಿ ಅಧ್ಯಾಪಕರು ಸ್ವಾಗತಿಸಿದ್ದಾರೆ. ವಿವಿ ಭೂಮಿಯನ್ನು ಭವಿಷ್ಯದಲ್ಲಿ ಕೈಗೆತ್ತಿಕೊಳ್ಳಲಿರುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವವರಿಗೆ ರಾಜ್ಯಪಾಲರು ಆಪತ್ಬಾಂಧವರಂತೆ ಬಂದಿದ್ದು, ಸರ್ಕಾರ ರಾಜ್ಯಪಾಲರ ಸೂಚನೆ ಪರಿಗಣಿಸಿ ಭೂಮಿ ಹಸ್ತಾಂತರವನ್ನು ಕೈ ಬಿಡಬೇಕೆಂದು ವಿವಿ ಅಧ್ಯಾಪಕರು ಆಗ್ರಹಿಸಿದ್ದಾರೆ.