ಬಿಜೆಪಿಯ ನೂತನ ಸದಸ್ಯ ಕೃಷ್ಣಭಟ್ ಅವರು ಆಡಿದ ಮಾತಿನಿಂದ ಮನನೊಂದ ಸದನದ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಅವರು ತಮ್ಮ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ಬುಧವಾರ ಮೇಲ್ಮನೆಯಲ್ಲಿ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಷಣವನ್ನು ಮುಂದುವರಿಸುವಂತೆ ಮನವಿ ಮಾಡಿದರೂ ಕೂಡ ನಾಣಯ್ಯ ಜಗ್ಗಲಿಲ್ಲ. ಕೊನೆಗೆ ಕೃಷ್ಣ ಭಟ್ ಅವರು ಕ್ಷಮೆ ಯಾಚಿಸಿದರು ನಾಣಯ್ಯ ಮಾತನಾಡಲು ನಿರಾಕರಿಸಿ ಸುಮ್ಮನೆ ಕುಳಿತಾಗ ಇಡೀ ಸದನದಲ್ಲಿ ಮೌನ ಆವರಿಸಿತ್ತು.
ಅವರು ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡುತ್ತ, ಬಿಜೆಪಿ ಪಕ್ಷದ ಅಧ್ಯಕ್ಷ ಈಶ್ವರಪ್ಪ ಅವರು ರಾಜ್ಯಪಾಲರು ರಾಜಕಾರಣಕ್ಕೆ ಬರಬೇಕು ಎಂದು ಟೀಕೆ ಮಾಡುತ್ತಾರೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವುದು ವಿಷಾದಕರ ಎಂದರು.
ಆಗ ನೂತನ ಸದಸ್ಯ ಕೃಷ್ಮ ಭಟ್ ಅವರು ನಾಣಯ್ಯ ಅವರು ಇಡೀ ಸದನಕ್ಕೆ ಮಾದರಿ ಸದಸ್ಯ ಎಂದು ತಿಳಿದಿದ್ದೆ. ಆದರೆ ಅವರು ಈ ರೀತಿ ಮಾತನಾಡುತ್ತಾರೆ ಎಂದು ಗೊತ್ತಿರಲಿಲ್ಲ. ಅವರು ಕಾಲಮಿತಿ ಇಟ್ಟುಕೊಂಡು ಮಾತನಾಡಿದರೆ ಒಳ್ಳೆಯದು ಎಂದರು.
ಕೃಷ್ಣ ಭಟ್ ಅವರ ಈ ಮಾತುಗಳಿಂದ ಮನನೊಂದ ನಾಣಯ್ಯ ಅವರು, ನಾನು ಇಷ್ಟು ವರ್ಷ ರಾಜಕಾರಣದಲ್ಲಿದ್ದುಕೊಂಡು ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ, ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಅನುಭವಿಸಿದ್ದೇನೆ. ಆದರೆ ನಾನು ಮಾತನಾಡುವುದನ್ನು ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ. ನಾನು ಭಾಷಣ ಮಾಡುವುದಿಲ್ಲ ಎಂದು ಕುಳಿತುಕೊಂಡರು.
ಆಗ ಆಡಳಿತ ಪಕ್ಷದ ಕೆಲ ಸದಸ್ಯರು ನಾಣಯ್ಯನವರೇ ನೀವು ಬೇಸರ ಮಾಡಿಕೊಳ್ಳಬೇಡಿ. ನೀವು ಹಿರಿಯ ಸದಸ್ಯರು, ಅನುಭವಿಗಳು ಭಾಷಣ ಮುಂದುವರಿಸಿ ಅಂತ ಪದೇ ಪದೇ ಮನವಿ ಮಾಡಿದರು.ಆದರೆ ನಾಣಯ್ಯ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ, ನನ್ನ ಮನಸ್ಸಿಗೆ ನೋವಾಗಿದೆ. ನಾನು ಮಾತನಾಡಲಾರೆ ಎಂದು ಸುಮ್ಮನೆ ಕುಳಿತರು.