ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಹಂಪಿ ಕನ್ನಡ ವಿವಿ ಭೂ ಹಸ್ತಾಂತರವನ್ನು ಕೈ ಬಿಟ್ಟಿರುವುದಾಗಿ ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮೇಲ್ಮನೆಯಲ್ಲಿ ಸ್ಪಷ್ಟಪಡಿಸುವ ಮೂಲಕ ಸಾರ್ವಜನಿಕರ ಒತ್ತಡಕ್ಕೆ ಸರ್ಕಾರ ಮಣಿದಂತಾಗಿದೆ.
ಇಂದು ವಿಧಾನಪರಿಷತ್ ಕಲಾಪದಲ್ಲಿ ವಿರೋಧ ಪಕ್ಷದ ನಾಯಕಿ ಕಾಂಗ್ರೆಸ್‌ನ ಮೋಟಮ್ಮ, ವಿಜಯನಗರ ಪುನಶ್ಚೇತನ ಟ್ರಸ್ಟ್‌ಗೆ ಹಂಪಿ ಕನ್ನಡ ವಿವಿಯ ಭೂಮಿಯನ್ನು ಹಸ್ತಾಂತರ ಮಾಡುವ ಸರ್ಕಾರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಪಕ್ಷದ ಹಲವು ಮುಖಂಡರು ಕೂಡ ಧ್ವನಿಗೂಡಿಸಿದರು.
ಮೋಟಮ್ಮ ಅವರು ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸಾರ್ವಜನಿಕರ ತೀವ್ರ ವಿರೋಧ ಹಾಗೂ ರಾಜ್ಯಪಾಲರ ಸಲಹೆ ಮೇರೆಗೆ ಹಂಪಿ ವಿವಿಯ ಒಂದಿಂಚೂ ಭೂಮಿಯನ್ನು ಪರಭಾರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ವಿಜಯನಗರ ಟ್ರಸ್‌ಗೆ ಪ್ರವಾಸೋದ್ಯಮ ಇಲಾಖೆಯ ಭೂಮಿಯನ್ನು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ಹಂಪಿ ಕನ್ನಡ ವಿವಿಯ ಭೂಮಿಯನ್ನು ವಿಜಯನಗರ ಟ್ರಸ್‌ಗೆ ಸರ್ಕಾರ ಪರಭಾರೆ ಮಾಡಲು ಹೊರಟಿರುವ ಕ್ರಮವನ್ನು ಖಂಡಿಸಿ ವಿವಿಯ ಕೆಲವು ಮುಖ್ಯಸ್ಥರು ರಾಜೀನಾಮೆಯನ್ನೂ ಸಲ್ಲಿಸಿದ್ದರು. ಅಲ್ಲದೇ ನಾಡಿನ ಹಿರಿಯ ಸಾಹಿತಿಗಳೂ ಕೂಡ ವಿರೋಧ ವ್ಯಕ್ತಪಡಿಸಿದ್ದರು.
ತದನಂತರ ಸಾರ್ವಜನಿಕರ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡ, ಹಂಪಿ ವಿವಿಯ ಭೂಮಿಯನ್ನು ಪರಭಾರೆ ಮಾಡಬಾರದೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಮುಖೇನ ಸಲಹೆ ನೀಡಿದ್ದರು.