ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ ತಪ್ಪು: ಪೇಜಾವರಶ್ರೀ
ಬೆಂಗಳೂರು, ಶುಕ್ರವಾರ, 12 ಮಾರ್ಚ್ 2010( 09:13 IST )
ಗೋ ಹತ್ಯೆ ನಿಷೇಧಕ್ಕೆ ಅಲ್ಪಸಂಖ್ಯಾತರು, ದಲಿತರ ವಿರೋಧವಿಲ್ಲ. ಹೀಗಿರುವಾಗ ಕಾಂಗ್ರೆಸ್ ಪಕ್ಷ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಗೋವುಗಳ ಸಂತತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದರೆ ಪಕ್ಷಬೇಧ ಮರೆತು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಬೆಂಬಲ ಸೂಚಿಸಬೇಕು ಎಂದು ಸಲಹೆ ನೀಡಿದರು.
ನಗರದ ಶಿಕ್ಷಕರ ಸದನದಲ್ಲಿ ಗುರುವಾರ ಗೋವಂಶ ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಗೋವಂಶ ಹತ್ಯೆ ನಿಷೇಧ ಕಾನೂನು ಜಾರಿ ಬೆಂಬಲಿಸಿ ಸರ್ವಧರ್ಮ ಗುರುಗಳ ಸಮಾವೇಶ ಮತ್ತು ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷ ವಿರೋಧ ವ್ಯಕ್ತಪಡಿಸದೆ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಹೇಳಿದ ಅವರು ಧರ್ಮ ಮತ್ತು ಮಾನವೀಯತೆ ಉಳಿವಿನ ಪ್ರಶ್ನೆ ಇದಾಗಿದೆ ಎಂದರು. ಕೃಷಿ ಉಳಿಯಬೇಕಾದರೆ ಗೋವು ಉಳಿಯಬೇಕು ಹೀಗಾಗಿ ಗೋವಿನ ಸಂತತಿ ಉಳಿವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.