ವಿವಾದ ಹುಟ್ಟು ಹಾಕುವುದು ಮತ್ತು ವಿವಾದಕ್ಕೆ ಸಿಲುಕುವುದು ಮಾಜಿ ಪ್ರಧಾನಿ ದೇವೇಗೌಡರಿಗೆ ಕರಗತವಾಗಿರುವ ಕಲೆ, ಅದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ನೈಸ್ ವಿರುದ್ಧ ಪ್ರತಿಭಟನೆ ನಡೆಸಲು ರೈತರನ್ನು ರೈಲಿನಲ್ಲಿ ದೆಹಲಿಗೆ ಕಳುಹಿಸಿ ಕೊಡುವ ಸಂದರ್ಭದಲ್ಲಿ, ಸ್ವತಃ ಗೌಡರು ಹಾಗೂ ಪಟಾಲಂನ ಎರಡು ಟೊಯೋಟಾ ಕಾರುಗಳು ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ಪ್ಲ್ಯಾಟ್‌ಫಾರಂ ಒಳಗೆ ಬಂದಿರುವುದು ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಟೀಕೆಗೆ ಒಳಗಾಗಿದ್ದಾರೆ.
ಮಂಗಳವಾರ ನಗರದಿಂದ ರೈತರನ್ನು ದೆಹಲಿಗೆ ಕಳುಹಿಸಲು ರೈಲ್ವೆ ನಿಲ್ದಾಣಕ್ಕೆ ಗೌಡರು ಆಗಮಿಸಿದ್ದ ಪರಿ ಎಲ್ಲರನ್ನೂ ಅಚ್ಚರಿಗೀಡು ಮಾಡಿತ್ತು. ರೈಲ್ವೆ ನಿಲ್ದಾಣದೊಳಗೆ ಯಾವುದೇ ವಾಹನಗಳು ಬರುವಂತಿಲ್ಲ ಎಂಬ ಕಾನೂನನ್ನು ಗಾಳಿಗೆ ತೂರಿ, ತಮ್ಮ ಕಾರನ್ನು ಫ್ಲ್ಯಾಟ್‌ಫಾರಂ ಮೇಲೆ ನಿಲ್ಲಿಸಿ ರೈತರನ್ನು ಬೀಳ್ಕೊಟ್ಟಿದ್ದರು. ನಂತರ ಗೌಡರು ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಇಲಾಖೆಯ ವಿಭಾಗೀಯ ಮ್ಯಾನೇಜರ್ ಅಖಿಲ್ ಅಗರ್‌ವಾಲ್, ನನಗೆ ಏನೂ ಗೊತ್ತಿಲ್ಲ, ನಿಜಕ್ಕೂ ದೇವೇಗೌಡರು ವಿಶೇಷ ಪರವಾನಗಿ ಪಡೆದುಕೊಂಡಿದ್ದಾರೋ ಇಲ್ಲವೋ ಎಂದಿರುವ ಅವರು, ವೈದ್ಯಕೀಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ರೈಲ್ವೆ ಫ್ಲ್ಯಾಟ್‌ಫಾರಂ ಒಳಗೆ ಯಾವುದೇ ವಾಹನ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಅದೇ ರೀತಿ ವಾಯುವ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಮಾತ್ರ, ಇಲ್ಲ ಮಾಜಿ ಪ್ರಧಾನಿ ದೇವೇಗೌಡರು ರೈಲ್ವೆ ಇಲಾಖೆಯ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ, ಅವರು ರೈಲ್ವೆ ನಿಲ್ದಾಣದ ಮುಖ್ಯದ್ವಾರದ ಸುಮಾರು 10-15ಮೀಟರ್‌ವರೆಗೆ ಮಾತ್ರ ತಮ್ಮ ಕಾರಿನಲ್ಲಿ ಹೋಗಿದ್ದರು ಎಂದು ಸಮಜಾಯಿಷಿ ನೀಡಿದ್ದಾರೆ.
ಏತನ್ಮಧ್ಯೆ ಜೆಡಿಎಸ್‌ನ ರಾಜ್ಯ ಕಾರ್ಯದರ್ಶಿ ಮಿಲಿಂದ್ ಧರ್ಮಸೇನಾ ಸ್ಪಷ್ಟನೆ ನೀಡಿದ್ದು, ದೇವೇಗೌಡರು ಜಠರ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಅವರಿಗೆ ನಡೆಯಲು ತೊಂದರೆ ತುಂಬಾ ತೊಂದರೆಯಾಗುತ್ತಿತ್ತು. ಹಾಗಾಗಿ ರೈಲ್ವೆ ಇಲಾಖೆಗೆ ಮನವಿ ಮಾಡಿಕೊಂಡು, ಪರವಾನಿಗೆ ಪಡೆದುಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಫ್ಲ್ಯಾಟ್‌ಫಾರಂನೊಳಗೆ ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ.
ಕಾಲಿನ ಬೇನೆಯಿಂದಲೂ ಗೌಡರು ಬಳಲುತ್ತಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೇ ಅಧಿಕೃತ ಪ್ರವಾಸದ ಸಂದರ್ಭದಲ್ಲಿ ಅವರು ಇದೇ ರೀತಿ ವಾಹನಗಳನ್ನು ನಿಲ್ದಾಣಗಳೊಳಗೆ ತೆಗೆದುಕೊಂಡು ಹೋಗುತ್ತಾರೆ. ಅವರೊಬ್ಬರೇ ಅಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ರಾಜಕಾರಣಿಗಳು ಈ ರೀತಿ ಮಾಡುವುದು ಸಹಜ ಎಂದು ಪಕ್ಷದ ಮೂಲಗಳು ಹೇಳಿವೆ.
ಅಲ್ಲದೇ ಸೆಕ್ಯುರಿಟಿಗಳ ಗೋಳಿನಿಂದ ತಪ್ಪಿಸಿಕೊಳ್ಳಲು ಯಾವುದೇ ವಿಮಾನ ನಿಲ್ದಾಣಗಳಲ್ಲಿಯೂ ಕೂಡ ಗೌಡರು ನೇರವಾಗಿ ತೆರಳಲು ಹೋಗುವ ವಿಶೇಷ ಸೌಲಭ್ಯವನ್ನು ಪಡೆದಿರುವುದಾಗಿಯೂ ಪಕ್ಷದ ಮೂಲಗಳು ಸಮರ್ಥನೆ ಕೊಟ್ಟಿವೆ.ಏನೇ ಆದರೂ ಸರ್ಕಾರದ ಕಾನೂನು ಮಾತ್ರ ಇದಕ್ಕೆ ಮನ್ನಣೆ ನೀಡುವುದಿಲ್ಲ ಎಂಬುದು ಮಾಜಿ ಪ್ರಧಾನಿಗಳಿಗೆ ಇನ್ನೂ ಅರಿವಾದಂತಿಲ್ಲ!