ಕಾಂಗ್ರೆಸ್ ಟಿಕೆಟಿಗಾಗಿ ಸೀಮೆಣ್ಣೆ ಸುರಿದು ಆತ್ಮಹತ್ಯೆ ಯತ್ನ
ಬೆಂಗಳೂರು, ಶುಕ್ರವಾರ, 12 ಮಾರ್ಚ್ 2010( 13:29 IST )
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ನಾಯಕನಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ (ಎನ್ಎಸ್‌ಯುಐ) ಪ್ರತಿಭಟನೆ ಸಂದರ್ಭ, ಮೈಸೂರು ಘಟಕದ ಅಧ್ಯಕ್ಷ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆಪಿಸಿಸಿ ಕಚೇರಿಯೆದುರು ಶುಕ್ರವಾರ ನಡೆದಿದೆ.
ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ಪ್ರಭಾಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯೆದುರು ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಘಟನೆಯ ಮೈಸೂರು ಘಟಕದ ಅಧ್ಯಕ್ಷ ಚೇತನ್ ಎಂಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸುತ್ತಿದ್ದರು. ತಕ್ಷಣವೇ ಇತರ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ.
ಬಿಜೆಪಿಯ ದುರಾಡಳಿತ ಮತ್ತು ಅವ್ಯವಹಾರಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿರುವ ಕೆ.ಸಿ. ಪ್ರಭಾಕರ್ ಅವರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಬೇಕು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕನಸಿನಂತೆ ಯುವ ನಾಯಕರಿಗೆ ರಾಜಕೀಯದಲ್ಲಿ ಅವಕಾಶ ಹೆಚ್ಚಾಗಬೇಕು ಎನ್ನುವುದು ನನ್ನ ಆಶಯ ಎಂದು ಆತ್ಮಹತ್ಯೆಗೆ ಯತ್ನಿಸಿದ ಚೇತನ್ ತಿಳಿಸಿದ್ದಾರೆ.
ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ಎಸ್‌ಯುಐ ಸಂಘಟನೆಯ ಹತ್ತಾರು ಜಿಲ್ಲೆಗಳ ಅಧ್ಯಕ್ಷರುಗಳು ಮತ್ತು ಕಾರ್ಯಕರ್ತರು ಕೆಪಿಸಿಸಿ ಕಚೇರಿಯೆದುರು ಬಂದಾಗ ಯಾವುದೇ ನಾಯಕರು ನಮ್ಮನ್ನು ಭೇಟಿ ಮಾಡಿಲ್ಲ. ನಮ್ಮನ್ನು ತೀವ್ರವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಸಲ್ಲದು. ಯುವಕರನ್ನು ಕಡೆಗಣಿಸಬಾರದು ಎಂಬುದು ನಮ್ಮ ಆಗ್ರಹವಾಗಿದೆ ಎಂದು ವಾರ್ತಾವಾಹಿನಿಯೊಂದರ ಜತೆ ಮಾತನಾಡುತ್ತಾ ಅವರು ವಿವರಣೆ ನೀಡಿದ್ದಾರೆ.