ರಾಜ್ಯ ಬಿಜೆಪಿ ಸರ್ಕಾರ ರೋಗಗ್ರಸ್ತ ಸರ್ಕಾರವಾಗಿದ್ದು, ಆಶ್ವಾಸನೆಗಳ ಅತಿಸಾರದಿಂದ, ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗದೆ ಬರೇ ಭಾಷಣ ಮಾಡುವ ಮೂಲಕ ರಕ್ತಹೀನತೆಯಿಂದ ನರಳುತ್ತಿದೆ. ಇದಕ್ಕೆ ಒಳ್ಳೆಯ ವೈದ್ಯರ ಚಿಕಿತ್ಸೆ ಕೊಡಿಸಬೇಕಾದ ಅಗತ್ಯವಿದೆ ಎಂದು ವೈ.ಎಸ್.ವಿ. ದತ್ತಾ ಸಲಹೆ ನೀಡಿದ್ದಾರೆ.
ವಿಧಾನಪರಿಷತ್‌ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಗಣಿ ಧಣಿಗಳು ಮತ್ತು ಶ್ರೀಮಂತರನ್ನು ಮುಟ್ಟುವ ಧೈರ್ಯವನ್ನು ಯಡಿಯೂರಪ್ಪ ಮಾಡಿಲ್ಲ. ಬದಲಿಗೆ ಶ್ರೀಸಾಮಾನ್ಯನ ಮೇಲೆ ತೆರಿಗೆ ಹಾಕಿದ್ದಾರೆ. ಮುಖ್ಯವಾಗಿ ಇದೊಂದು ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧನ ಕ್ಷೇತ್ರಕ್ಕೆ ಈ ವರ್ಷ 3,348 ಕೋಟಿ ರೂ. ಎತ್ತಿಡಲಾಗಿದೆ. ಆದರೆ ಬೇಸಿಗೆಯಲ್ಲಿ ವಿದ್ಯುತ್ ಖರೀದಿಗೆ ಅಂದಾಜು 5 ಸಾವಿರ ಕೋಟಿ ರೂ. ಬೇಕು, ಎಸ್ಕಾಂಗಳಿಗೆ ವಿದ್ಯುತ್ ಉತ್ಪಾದನೆ ಕಾಮಗಾರಿಗಳಿಗೆ ಹೇಗೆ ಹಣ ಒದಗಿಸುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರ ದಿವಾಳಿಯಾಗಿದ್ದು, ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.