ಬಿಬಿಎಂಪಿ ಚುನಾವಣಾ ಅಖಾಡ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗತೊಡಗಿದ್ದು, ಶುಕ್ರವಾರ ಚಡ್ಡಿಯಲ್ಲೇ ಆಗಮಿಸಿದ ಬೇಗೂರು ವಾರ್ಡ್‌ನ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಸಿದ ವಿಶೇಷವಾಗಿ ಗಮನಸೆಳೆದರು.
ಬೇಗೂರು ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾದ 'ಚಡ್ಡಿ' ನಾಗರಾಜ್(ನಾಗ) ಎಂಬವರು ತಮ್ಮ ಮನೆಯವರು ಹಾಗೂ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಚಿಕ್ಕಂದಿನಿಂದಲೇ ಚಡ್ಡಿ ತೊಡುತ್ತಾ ಬಂದಿರುವ ತಾನು,ಚಡ್ಡಿಯಲ್ಲೇ ಪಾಲಿಕೆ ಪ್ರವೇಶ ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಹೇಳಿದ ಅವರು, ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂದು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪಾಲಿಕೆ ಚುನಾವಣೆಗಾಗಿ ಎಲ್ಲಾ ಪಕ್ಷಗಳಲ್ಲಿಯೂ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಇಂದೂ ಕೂಡ ಉರಿ ಬಿಸಿಲನ್ನೂ ಲೆಕ್ಕಿಸದೇ ಫೀಲ್ಡಿಗಿಳಿದ ಆಕಾಂಕ್ಷಿಗಳು ಪೂಜೆ, ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು.
ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಂಡಾಯದ ಬಿಸಿ ವರಿಷ್ಠರಿಗೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಟ್ಟಿಯನ್ನು ನೋಡಿಕೊಂಡು ಅಂತಿಮವಾಗಿ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಜೆಡಿಎಸ್ ಪಕ್ಷ ಈಗಾಗಲೇ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಏತನ್ಮಧ್ಯೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರದಂದು ಸುಮಾರು ನೂರಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.