ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ಮನೆ ಜಟಾಪಟಿ: ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗ (Congress | JDS | Motamma | Janrdana Reddy | Yeddyurappa)
Bookmark and Share Feedback Print
 
ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಕೃಷಿ ಜಮೀನು ನೀಡುವಲ್ಲಿ ರೈತರ ಒಪ್ಪಿಗೆ ಇದೆ ಎಂಬ ಸರ್ಕಾರದ ಸತ್ಯಾಸತ್ಯತೆ ಅರಿಯಲು ಸದನ ಸಮಿತಿ ರಚಿಸಬೇಕು ಎಂದು ಪಟ್ಟು ಹಿಡಿದ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮೇಲ್ಮನೆಯಲ್ಲಿ ಸಭಾತ್ಯಾಗ ಮಾಡಿದ ಘಟನೆ ಶುಕ್ರವಾರ ನಡೆಯಿತು.

ಸದನ ಸಮಿತಿ ರಚಿಸುವಂತೆ ಗುರುವಾರದಿಂದ ಆರಂಭಿಸಿದ್ದ ಧರಣಿಯನ್ನು ಇಂದು ಮುಂದುವರಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಭಾಪತಿ ವೀರಣ್ಣ ಮತ್ತಿಕಟ್ಟಿಯವರ ಮನವಿ ಮೇರೆಗೆ ಧರಣಿ ಕೈಬಿಟ್ಟು ಸ್ವಸ್ಥಾನಕ್ಕೆ ಮರಳಿದರಾದರೂ ಸದನ ಸಮಿತಿ ರಚಿಸಲು ಒಪ್ಪದ ಸರ್ಕಾರದ ನಿಲುವನ್ನು ವಿರೋಧಿಸಿ ಪ್ರತಿಪಕ್ಷ ನಾಯಕಿ ಮೋಟಮ್ಮ ಅವರ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.

ಬೆಳಿಗ್ಗೆ ಸದನದಲ್ಲಿ ಸಮಾವೇಶ ಆರಂಭವಾಗುತ್ತಿದ್ದಂತೆಯೇ ವಿವಾದಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರಚಿಸುವಂತೆ ನಿನ್ನೆಯಿಂದ ಆರಂಭಿಸಿದ್ದ ಧರಣಿಯನ್ನು ಮುಂದುವರಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಬಳ್ಳಾರಿ ಕೃಷಿ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ಸ್ಥಾಪಿಸಬಾರದು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಕೊಂಡಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮತ್ತು ಸರ್ಕಾರ ಕ್ಷಮೆಯಾಚಿಸಬೇಕೆಂದು ವಿಪಕ್ಷಗಳ ಸದಸ್ಯರು ಪಟ್ಟು ಹಿಡಿದರು. ಆಗ ವಾಗ್ವಾದ, ಧರಣಿಗಳಿಂದಾಗಿ ಸಭಾಪತಿಗಳು ಪ್ರತಿಪಕ್ಷಗಳ ನಾಯಕರು ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಎರಡು ಬಾರಿ ಕಲಾಪ ಮುಂದೂಡಿದ ನಂತರ ಮೂರನೇ ಬಾರಿ ಸದನ ಆರಂಭಗೊಂಡಿತ್ತು.

ನಂತರ ತಾನು ಭಾವೋದ್ವೇಗಕ್ಕೆ ಒಳಗಾಗಿ ಆಡಿರುವ ಮಾತಿಗೆ ವಿಷಾದ ವ್ಯಕ್ತಪಡಿಸುವುದಾಗಿ ಸಚಿವ ಜನಾರ್ದನ ರೆಡ್ಡಿ ಹೇಳಿ, ಬಳ್ಳಾರಿಯಲ್ಲಿ ವಿಶ್ವಮಟ್ಟದ ಕಾರ್ಖಾನೆ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬರುವುದರಿಂದ ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಆದರೂ ವಿಮಾನ ನಿಲ್ದಾಣ ನಿರ್ಮಾಣದ ಸತ್ಯಾಸತ್ಯತೆ ತಿಳಿಯಲು ಸರ್ಕಾರ ಸದನ ಸಮಿತಿ ರಚಿಸಲು ಸರ್ಕಾರ ಒಪ್ಪದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ