ಬಾಬಾಬುಡನ್ ಗಿರಿಯಲ್ಲಿರುವ ದತ್ತಪೀಠದ ದುರಸ್ತಿ ಕಾರ್ಯಕ್ಕೆ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ಗ್ರೀನ್ ಸಿಗ್ನಲ್ ತೋರಿಸಿದೆ.
ಪುರಾತತ್ವ ಇಲಾಖೆ ಉಸ್ತುವಾರಿಯಲ್ಲಿ ದತ್ತಪೀಠದಲ್ಲಿ ನೆನೆಗುದಿಗೆ ಬಿದ್ದಿರುವ ಗುಹೆ ದುರಸ್ತಿ ಕಾರ್ಯಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ರವೀಂದ್ರ ಮತ್ತು ರಾಧಾಕೃಷ್ಣ ನೇತೃತ್ವದ ವಿಭಾಗೀಯ ಪೀಠ ಅನುಮತಿ ನೀಡಿದೆ.
ದತ್ತಪೀಠದಲ್ಲಿ ಗುಹೆ ದುರಸ್ತಿ ಕಾರ್ಯಕ್ಕೆ ಅನುಮತಿ ನೀಡವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಆದೇಶ ನೀಡಿದ್ದಾರೆ. ದತ್ತಪೀಠದ ಗುಹೆ ಪುರಾತನ ಸ್ಮಾರಕವಾಗಿದ್ದು, ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಸ್ಮಾರಕಗಳಿಗೆ ಧಕ್ಕೆ ಬಾರದಂತೆ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಮಾನ್ಯ ಮಾಡಿದ ತಜ್ಞ ಗುತ್ತಿಗೆದಾರರಿಂದಲೇ ಈ ಕಾಮಗಾರಿ ನಿರ್ವಹಿಸಬೇಕೆಂದು ನ್ಯಾಯಪೀಠ ಸೂಚಿಸಿದೆ.
2008ರ ಏಪ್ರಿಲ್‌ನಲ್ಲಿ ದತ್ತಪೀಠದ ಛಾವಣಿ ಕುಸಿದಿತ್ತು. 2008ರ ಜೂನ್‌ನಲ್ಲಿ ಗುಹೆಯ ಪ್ರವೇಶ ದ್ವಾರದಲ್ಲಿ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಏತನ್ಮಧ್ಯೆ ಗುಹೆ ದುರಸ್ತಿ ಕಾರ್ಯಕ್ಕೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ದತ್ತಪೀಠದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಲಯ ಆದೇಶ ನೀಡಿದ್ದರು ಕೂಡ ಆದೇಶ ಉಲ್ಲಂಘಿಸಿ ಕಾಮಗಾರಿ ಆರಂಭಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಕಾರಣದಿಂದ ಗುಹೆ ದುರಸ್ತಿ ಕಾಮಗಾರಿಕೆ ತಡೆಯಾಜ್ಞೆ ನೀಡಿತ್ತು.