ವಿಧಾನಸಭೆಯ ಸಭಾಧ್ಯಕ್ಷ ಕೆ.ಜಿ ಬೋಪಯ್ಯ ಅವರನ್ನು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಾ, ಪ್ರಜಾಪ್ರಭುತ್ವದ ನಿಯಮದಲ್ಲಿ ಕೆಲಸ ನಿರ್ವಹಿಸದೆ ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಟುವಾಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವಂತಹ ಸಂಪ್ರದಾಯವನ್ನು ಇದುವರೆಗೂ ಯಾವ ಸಭಾಪತಿಗಳು ಮಾಡಿಲ್ಲ. ಅದರ ಅರಿವೇ ಇಲ್ಲದ ಹಾಗೆ ಬೋಪಯ್ಯ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ಸಹಿ ಮಾಡಿ ಬಂದಿದ್ದಾರೆ. ಸಭಾಧ್ಯಕ್ಷರ ವರ್ತನೆ ಮತ್ತು ಆಡಳಿತ ಪಕ್ಷದ ವೈಖರಿಯನ್ನು ನೋಡಿದಾಗ ನಾವೇನು ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಎಂಬ ಅನುಮಾನ ಮೂಡುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಜೀಂ ಪ್ರೇಮ್‌ಜೀ ಖಾಸಗಿ ವಿಶ್ವವಿದ್ಯಾಲಯ ವಿಧೇಯಕಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳಿದ್ದು ಅದನ್ನು ನಿವಾರಿಸುವಂತೆ ಕೋರಿ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಕೋರಿದ್ದೇವೆ. ಆದರೆ ಸರ್ಕಾರ ಇದಕ್ಕೆ ಸಮ್ಮತಿಸದೆ, ಎರಡು ವಿಧೇಯಕಗಳನ್ನು ಅಂಗಿಕರಿಸಿದೆ. ಇದರ ವಿರುದ್ದ ಮಾರ್ಚ್ 17 ರಂದು ಧರಣಿ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.