ಇದು ಕರ್ನಾಟಕದ ರೆಕಾರ್ಡ್; ಒಂದೇ ವರ್ಷದಲ್ಲಿ 488 ಅತ್ಯಾಚಾರ!
ಬೆಂಗಳೂರು, ಭಾನುವಾರ, 14 ಮಾರ್ಚ್ 2010( 10:35 IST )
ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ 488 ಅತ್ಯಾಚಾರ ಹಾಗೂ 584 ಮಹಿಳೆಯರನ್ನು ಕೊಲೆ ಮಾಡಲಾಗಿದೆ. ಈ ಮಾಹಿತಿಯನ್ನು ನೀಡಿದ್ದು ಸ್ವತಃ ಗೃಹಸಚಿವರಾಗಿರುವ ವಿ.ಎಸ್. ಆಚಾರ್ಯ.
ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಅಜೀಂ, ಎಂ. ಶ್ರೀನಿವಾಸ್, ವೈ.ಎ. ನಾರಾಯಣ ಸ್ವಾಮಿ, ಕೆ. ಪ್ರತಾಪಚಂದ್ರ ಶೆಟ್ಟಿ, ವಿಮಲಾ ಗೌಡ ಕೇಳಿದ್ದ ಪ್ರಶ್ನೆಗಳಿಗೆ ಸಚಿವರು ಲಿಖಿತವಾಗಿ ಉತ್ತರಿಸಿದ್ದಾರೆ.
ಎರಡು ವರ್ಷದಲ್ಲಿ 5060 ಮಹಿಳೆಯರು ಕಾಣೆ... 2008ರಲ್ಲಿ 2493, 2009ರಲ್ಲಿ 2567 ಮಹಿಳೆಯರು ಕಾಣೆಯಾಗಿದ್ದಾರೆ. ಕಾಣೆಯಾಗಿದ್ದ ಮಹಿಳೆಯರಲ್ಲಿ 2008 ಮತ್ತು 2009ರಲ್ಲಿ ಕ್ರಮವಾಗಿ 2172 ಮತ್ತು 2011 ಮಂದಿಯನ್ನು ಪತ್ತೆ ಹಚ್ಚಲಾಗಿದೆ.
ಕಳೆದ ಸುಮಾರು 20 ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 454 ಕೊಲೆ ಪ್ರಕರಣಗಳು ನಡೆದಿವೆ. ಇದರಲ್ಲಿ 396 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸಚಿವರು ತನ್ನ ಮಾಹಿತಿಯಲ್ಲಿ ತಿಳಿಸಿದ್ದಾರೆ.
98 ಧಾರ್ಮಿಕ ಕೇಂದ್ರಗಳಿಗೆ ದಾಳಿ.... 21 ದೇವಸ್ಥಾನ, 25 ಮಸೀದಿ ಮತ್ತು 52 ಚರ್ಚುಗಳು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ 98 ಧಾರ್ಮಿಕ ಕೇಂದ್ರಗಳಿಗೆ ದಾಳಿ ನಡೆದಿದೆ.
2007ರಲ್ಲಿ ನಾಲ್ಕು ದೇವಾಲಯ, ಐದು ಮಸೀದಿ, ಆರು ಚರ್ಚ್, 2008ರಲ್ಲಿ ಏಳು ದೇವಾಲಯ, ಏಳು ಮಸೀದಿ, 38 ಚರ್ಚ್, 2009ರಲ್ಲಿ ಏಳು ದೇವಾಲಯ, 11 ಮಸೀದಿ, ಎಂಟು ಚರ್ಚ್, 2010ರಲ್ಲಿ ಎಂಟು ದೇವಾಲಯ, ಐದು ಮಸೀದಿ ಹಾಗೂ ಆರು ಚರ್ಚುಗಳ ಮೇಲೆ ದಾಳಿ ನಡೆದಿದೆ.
ದೇವಾಲಯ, ಚರ್ಚ್, ಮಸೀದಿ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 105 ಪ್ರಕರಣಗಳು ದಾಖಲಾಗಿವೆ. 461 ಆರೋಪಿಗಳನ್ನು ಬಂಧಿಸಲಾಗಿದೆ. ಕರ್ನಾಟಕ ಮಾನವ ಹಕ್ಕುಗಳ ಆಯೋಗದಲ್ಲಿ 72 ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಧಾರ್ಮಿಕ ಕೇಂದ್ರಗಳ ಮೇಲೆ ನಡೆದಿರುವ ದಾಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೇ ಅಗ್ರ ಸ್ಥಾನ ಪಡೆದುಕೊಂಡಿದೆ. ಇಲ್ಲಿ 2008ರಲ್ಲಿ 16 ಚರ್ಚ್ ಹಾಗೂ 2009ರಲ್ಲಿ ಐದು ಮಸೀದಿಗಳ ಮೇಲೆ ದಾಳಿ ನಡೆದಿದೆ.