ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನ್ನಡಕ್ಕೆ ಶಾಸ್ತ್ರೀಯ ಸವಲತ್ತು ನೀಡಲು ಇದ್ದ ಅಡ್ಡಿ ನಿವಾರಣೆ: ಮೊಯ್ಲಿ
(classical language | Kannada | Central govt | Veerappa Moily)
ಕನ್ನಡಕ್ಕೆ ಶಾಸ್ತ್ರೀಯ ಸವಲತ್ತು ನೀಡಲು ಇದ್ದ ಅಡ್ಡಿ ನಿವಾರಣೆ: ಮೊಯ್ಲಿ
ಬೆಂಗಳೂರು, ಭಾನುವಾರ, 14 ಮಾರ್ಚ್ 2010( 12:12 IST )
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದರೂ ಸವಲತ್ತುಗಳ ಸಿಗದೇ ಇರಲು ಅಡ್ಡಿಯಾಗಿದ್ದ ವಿಚಾರಗಳು ನಿವಾರಣೆಯಾಗಿವೆ. ಹಾಗಾಗಿ ಕನ್ನಡ ಅಭಿವೃದ್ಧಿ - ಅಧ್ಯಯನಕ್ಕೆ ಕೇಂದ್ರ ಸರಕಾರದ ಸಹಕಾರವನ್ನು ಸಮರ್ಥವಾಗಿ ಬಳಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆ ನೀಡಿದ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಕನ್ನಡಕ್ಕೆ ಸಿಗಬೇಕಾದ ಅನುದಾನಗಳನ್ನು ಇದುವರೆಗೆ ತಡೆ ಹಿಡಿಯಲಾಗಿತ್ತು. ಹಾಗಾಗಿ ಶಾಸ್ತ್ರೀಯ ಭಾಷೆಯ ಸ್ಥಾನ ಕನ್ನಡಕ್ಕೆ ಸಿಕ್ಕಿದ್ದರೂ, ಅದಕ್ಕೆ ಪೂರಕವಾದ ಯಾವುದೇ ಸವಲತ್ತುಗಳು ದೊರಕಿರಲಿಲ್ಲ. ಆದರೆ ಶಾಸ್ತ್ರೀಯ ಭಾಷೆಯೆಂದು ಕನ್ನಡ ಘೋಷಿಸಲ್ಪಟ್ಟಿರುವುದರಿಂದ ಸವಲತ್ತುಗಳನ್ನು ನೀಡಬಹುದು ಎಂದು ಕಾನೂನು ಸಲಹೆ ನೀಡಲಾಗಿದೆ ಎಂದು ಮೊಯ್ಲಿ ಹೇಳಿದ್ದಾರೆ.
ಸಚಿವಾಲಯ ಸಲಹೆ ಕೇಳಿತ್ತು.... ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ನೀಡುವ ಕೇಂದ್ರ ಸಂಸ್ಕೃತಿ ಸಚಿವಾಲಯದ ಗೆಜೆಟ್ ಅಧಿಸೂಚನೆಯನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟಿನಲ್ಲಿ ಗಾಂಧಿ ಎನ್ನುವ ವ್ಯಕ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾ ಆಗಿಲ್ಲ. ಹಾಗಾಗಿ ಕನ್ನಡಕ್ಕೆ ಸಿಗಬೇಕಾದ ಸವಲತ್ತುಗಳನ್ನು ನೀಡಬಹುದೇ ಎಂದು ಸಂಸ್ಕೃತಿ ಸಚಿವಾಲಯವು ಮಾನವ ಸಂಪನ್ಮೂಲ ಸಚಿವಾಲಯದಲ್ಲಿ ಸಲಹೆ ಕೇಳಿತ್ತು.
ಇದು ಕಾನೂನಿಗೆ ಸಂಬಂಧಪಟ್ಟ ವಿಚಾರವಾಗಿರುವ ಕಾರಣ ಮೊಯ್ಲಿಯವರ ಕಾನೂನು ಸಚಿವಾಲಯಕ್ಕೆ ವಿಚಾರ ಬಂದಿತ್ತು. ಇದನ್ನು ಪರಿಶೀಲಿಸಿದ ಮೊಯ್ಲಿ, ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಿರುವುದರಿಂದ ಸವಲತ್ತುಗಳನ್ನು ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ಸಂಸ್ಕೃತಿ ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ.
ಹಾಗಾಗಿ ಇನ್ನು ಕನ್ನಡ ಭಾಷೆಯ ಅಭಿವೃದ್ಧಿ ಚಟುವಟಿಕೆಗಳು, ವಿಶ್ವ ವಿದ್ಯಾಲಯಗಳಲ್ಲಿ ಕನ್ನಡದ ಸಂಶೋಧನೆ, ಕನ್ನಡದ ಬೆಳವಣಿಗೆಗೆ ಶ್ರಮಿಸಿದವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಮುಂತಾದ ಕ್ರಮಗಳಿಗೆ ಮುಂದಾಗಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಸಹಕಾರಗಳನ್ನು ಕೇಂದ್ರ ಸರಕಾರ ನೀಡುತ್ತದೆ. ಮಾರ್ಚ್ 15ರೊಳಗೆ ಕನ್ನಡ ಅಧ್ಯಯನದ ಉನ್ನತ ಕೇಂದ್ರ ತೆರೆಯುವ ಪ್ರಸ್ತಾವನೆ ಸಲ್ಲಿಸಲು ಕೂಡ ಸೂಚನೆ ನೀಡಲಾಗಿದೆ ಮೊಯ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರು... ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಮತ್ತು ಹಿರಿಯ ವಿದ್ವಾಂಸರ ನಿಯೋಗ ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿಗೆ ತೆರಳಿ ಈ ಕುರಿತು ಚರ್ಚೆ ನಡೆಸಿತ್ತು. ಅದು ಫಲಪ್ರದವಾಗಿದ್ದು, ಶೀಘ್ರದಲ್ಲೇ ಅನುದಾನ ನೀಡುವ ಭರವಸೆಯನ್ನು ಕೇಂದ್ರ ಸರಕಾರ ನೀಡಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆ ಸಿಕ್ಕಿದರೂ ಸವಲತ್ತುಗಳು ಸಿಗದೇ ಇರುವುದರ ರಾಜ್ಯದ ನೋವನ್ನು ಕೇಂದ್ರವು ಅರ್ಥ ಮಾಡಿಕೊಂಡಿದೆ ಎಂದರು.