ಟಿಕೆಟ್‌ಗಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರ ದಾಂಧಲೆ, ಕಲ್ಲೆಸೆತ
ಬೆಂಗಳೂರು, ಭಾನುವಾರ, 14 ಮಾರ್ಚ್ 2010( 13:28 IST )
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಭಾಕರ ರೆಡ್ಡಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಸಭೆ ನಡೆಸುತ್ತಿರುವ ರೆಸಾರ್ಟ್ ಗೇಟಿಗೆ ಕಲ್ಲೆಸೆದು ದಾಂಧಲೆ ನಡೆಸಿದ್ದಾರೆ.
ಬಿಬಿಎಂಪಿ ಚುನಾವಣೆಗಾಗಿ ಬನ್ನೇರುಘಟ್ಟದಲ್ಲಿನ ಖಾಸಗಿ ರೆಸಾರ್ಟ್ ಒಂದರಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿರುವ ಕಾಂಗ್ರೆಸ್ ನಾಯಕರು ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದ ಯುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ರೆಸಾರ್ಟ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ರೆಸಾರ್ಟ್ ಗೇಟಿಗೆ ಹಾನಿ ಮಾಡಲಾಗಿದ್ದು, ಕಾರ್ಯಕರ್ತರು ಭಾರೀ ದಾಂಧಲೆ ನಡೆಸಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಎನ್ಎಸ್‌ಯುಐ ಕಾರ್ಯಕರ್ತರು ರೆಸಾರ್ಟ್‌ಗೆ ನುಗ್ಗಲು, ಮುತ್ತಿಗೆ ಹಾಕಲು ಯತ್ನಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಬೆಂಗಳೂರು ನಗರ ಎನ್‌ಎಸ್‌ಯುಐ ಅಧ್ಯಕ್ಷ ಪ್ರಭಾಕರ ರೆಡ್ಡಿ ಸಹಿತ ಹೆಚ್ಚಿನ ಯುವಕರಿಗೆ ಕಾಂಗ್ರೆಸ್ ಆದ್ಯತೆ ನೀಡಬೇಕೆಂದು ಕೆಪಿಸಿಸಿ ಕಚೇರಿಯೆದುರು ಕೂಡ ಪ್ರತಿಭಟನೆ ನಡೆಸಲಾಗುತ್ತಿದೆ. ಇಲ್ಲಿ ನೂರಾರು ಎನ್ಎಸ್‌ಯುಐ ಕಾರ್ಯಕರ್ತರು ಪಾಲ್ಗೊಂಡು ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗುತ್ತಾ, ಯುವಕರಿಗೆ ಟಿಕೆಟ್ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಪ್ರಭಾಕರ ರೆಡ್ಡಿಯವರಿಗೆ ಟಿಕೆಟ್ ನೀಡಬೇಕೆಂದು ಕೆಲವು ದಿನಗಳ ಹಿಂದಷ್ಟೇ ಮೈಸೂರು ಘಟಕದ ಅಧ್ಯಕ್ಷ ಚೇತನ್ ಎಂಬವರು ಆತ್ಮಾಹುತಿಗೆ ಯತ್ನಿಸಿದ್ದರು.
ಬಿಬಿಎಂಪಿ ಚುನಾವಣೆ ಅಧಿಸೂಚನೆ ಹೊರ ಬಿದ್ದ ಬಳಿಕ ಯುವಕರಿಗೆ ಆದ್ಯತೆ ನೀಡಬೇಕೆಂದು ಯುವ ಕಾಂಗ್ರೆಸ್ ಘಟಕವು ಆಗ್ರಹಿಸುತ್ತಾ ಬಂದಿದ್ದರೂ, ಕಾಂಗ್ರೆಸ್ ನಾಯಕರು ನಿರ್ಲಕ್ಷಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ನಡುವೆ ಹಲವು ಯುವ ಕಾಂಗ್ರೆಸ್ ಸದಸ್ಯರು ಮತ್ತು ಅಧ್ಯಕ್ಷರುಗಳು ರಾಜೀನಾಮೆಯನ್ನೂ ಸಲ್ಲಿಸಿದ್ದಾರೆ ಎಂದು ವರದಿಗಳು ಹೇಳಿವೆ. ಒತ್ತಡ ತಂತ್ರವನ್ನು ಅನುಸರಿಸುವ ನಿಟ್ಟಿನಲ್ಲಿ ಈ ರಾಜೀನಾಮೆಗಳನ್ನು ನೀಡಲಾಗಿದ್ದು, ಯುವಕರಿಗೆ ಟಿಕೆಟ್ ನೀಡದಿದ್ದರೆ ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಅವರು ಬೆದರಿಕೆ ಹಾಕಿದ್ದಾರೆ.