ಬಿಬಿಎಂಪಿ ಚುನಾವಣಾ ಟಿಕೆಟ್ ಹಂಚಿಕೆ ಸಂಬಂಧ ಇದೀಗ ರಾಜಕೀಯ ಪಕ್ಷಗಳ ತಿಕ್ಕಾಟಕ್ಕೆ ಕಾರಣವಾಗಿದ್ದು, ಕೆಲ ನಾಯಕರು ತೀವ್ರ ಅಸಮಾಧಾನಗೊಂಡಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸಂಬಂಧ ಪಕ್ಷದ ಮುಖಂಡರು 198 ವಾರ್ಡ್‌ಗಳ ಪೈಕಿ 154 ವಾರ್ಡ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರ ವಿರುದ್ಧ ಭಾರೀ ಅಸಮಾಧಾನಗಳು ಕಾಣಿಸಿಕೊಂಡಿವೆ.
ಟಿಕೆಟ್ ಹಂಚಿಕೆಯ ಜವಾಬ್ದಾರಿ ಹೊತ್ತಿರುವ ಸಚಿವ ಆರ್. ಅಶೋಕ್ ಅವರ ವಿರುದ್ಧ ಇತರೆ ಶಾಸಕರು ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೊದಲಿನಿಂದಲೂ ಪಕ್ಷದ ಸಂಘಟನೆಗಾಗಿ ದುಡಿದಿರುವ ಮುಖಂಡರನ್ನು ಕಡೆಗಣಿಸಲಾಗಿದೆ ಎಂಬುದು ಹಲವರ ಅಭಿಪ್ರಾಯ.
ಬಿಜೆಪಿ ಆಡಳಿತಾರೂಢ ಪಕ್ಷವಾಗಿರುವುದರಿಂದ ಸಹಜವಾಗಿ ಇಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಟಿಕೆಟ್ ವಂಚಿತರಲ್ಲಿ ಬಹುತೇಕ ಮಂದಿ ಬಂಡಾಯದ ಬಾವುಟ ಹಾರಿಸುವ ಪ್ರಯತ್ನ ನಡೆಯುತ್ತಿದೆ.
ಇದೇ ವೇಳೆ ಜೆಡಿಎಸ್ ಪಕ್ಷದಲ್ಲಿಯೂ ಇಂತಹುದೇ ಅಸಮಾಧಾನ ಭುಗಿಲೆದ್ದಿದೆ. ಬಿಬಿಎಂಪಿ ಚುನಾವಣೆಗೆ ರೌಡಿ ಪಟ್ಟಿಯಲ್ಲಿದ್ದು, ಜೈಲು ಶಿಕ್ಷೆಗೆ ಒಳಗಾದವರಿಗೆ ಟಿಕೆಟ್ ನೀಡಿರುವುದು ಕೆಲವರಿಗೆ ಅತೃಪ್ತಿ ಮೂಡಿಸಿದೆ.
ಜೆಡಿಎಸ್ ಬಿಡುಗಡೆ ಮಾಡಿರುವ 150 ಅಭ್ಯರ್ಥಿಗಳ ಪಟ್ಟಿಯ ಕುರಿತು ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೆಚ್ಚಾಗಿರುವುದು ಪಕ್ಷಕ್ಕೆ ಬಂಡಾಯದ ಭೀತಿಯನ್ನು ತಂದಿದೆ. ಸುಮಾರು 20ಕ್ಕೂ ಹೆಚ್ಚು ಮೊಕದ್ದಮೆಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಬಂದಿರುವವರಿಗೆ ಟಿಕೆಟ್ ನೀಡಬಾರದೆಂಬುದು ಕಾರ್ಯಕರ್ತರ ಬಯಕೆಯಾಗಿತ್ತು. ಆದರೆ ಇದನ್ನು ಪಕ್ಷದ ಮುಖಂಡರು ನಿರ್ಲಕ್ಷಿಸಿದ್ದಾರೆ ಎಂಬ ಅಸಮಾಧಾನಗಳು ಕಾಣಿಸಿಕೊಂಡಿವೆ.