ಗೆಲ್ಲೋದು ಬಿಜೆಪಿ ಅನ್ನೋ ಸತ್ಯ ಪ್ರತಿಪಕ್ಷಗಳಿಗೆ ಗೊತ್ತು: ಈಶ್ವರಪ್ಪ
ಬೆಂಗಳೂರು, ಸೋಮವಾರ, 15 ಮಾರ್ಚ್ 2010( 09:54 IST )
ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಖಚಿತ. ಸರಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಸತ್ಯ ತಿಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಬೆಂಗಳೂರು ಹೊರವಲಯದ ರೆಸಾರ್ಟ್ ಒಂದರಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಕಳೆದ 60 ವರ್ಷಗಳಲ್ಲಿ ನಡೆಯದೇ ಇದ್ದ ಅಭಿವೃದ್ಧಿಯನ್ನು ಬಿಜೆಪಿ ಕೇವಲ 20 ತಿಂಗಳುಗಳಲ್ಲಿ ಮಾಡಿ ತೋರಿಸಿದೆ. ಈ ಬಗ್ಗೆ ಯಾರಾದರೂ ಸವಾಲು ಹಾಕುವುದಿದ್ದರೆ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಘೋಷಿಸಿದರು.
ಈ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ, ಗೊಂದಲ ಮೂಡಿಸಲು ಯತ್ನಿಸಿದರೂ ಗೆಲ್ಲುವುದು ನಾವೇ. ಇದರಲ್ಲಿ ಯಾವುದೇ ಅನುಮಾನ ಬೇಕಾಗಿಲ್ಲ. ಈ ಸತ್ಯ ಅವರಿಗೂ ಗೊತ್ತಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಬಿಜೆಪಿ ಎಲ್ಲಾ ತಾರತಮ್ಯ ನೀತಿ ಅನುಸರಿಸಿಲ್ಲ. ಎಲ್ಲಾ ಜಾತಿ-ಸಮುದಾಯಗಳು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ತಂದಿದೆ. ನಮ್ಮ ಗೆಲುವಿಗೆ ಸರಕಾರದ ಅಭಿವೃದ್ಧಿ ಕಾರ್ಯಗಳೇ ಸಾಕು ಎಂದರು.
ಬಿಜೆಪಿ ಸರಕಾರವು ಮುಂದಿನ ಮೂರು ವರ್ಷಗಳ ಕಾಲ ಎಗ್ಗಿಲ್ಲದೆ ಅಧಿಕಾರದಲ್ಲಿ ಮುಂದುವರಿಯಲಿದ್ದು, ಪ್ರತಿಪಕ್ಷಗಳ ತಂತ್ರಗಳು ವಿಫಲಗೊಳ್ಳಲಿವೆ. ಅತ್ತ ತನ್ನ ಪಾಪವನ್ನು ಮುಚ್ಚಿ ಹಾಕಲು ಸರಕಾರದ ವಿರುದ್ಧ ನೈಸ್ ಹೆಸರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲ ಜನರ ಮುಂದೆ ನಡೆಯುವುದಿಲ್ಲ. ಅವರಿಗೆ ಜನತೆಯೇ ಬುದ್ಧಿ ಕಲಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪದಾಧಿಕಾರಿಗಳು ಮುಂಬರುವ ಬಿಬಿಎಂಪಿ, ಗ್ರಾಮ ಪಂಚಾಯತಿ ಮತ್ತು ಸಹಕಾರ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಬೇಕೆಂದು ಕರೆ ನೀಡಿದ ಅವರು, ಸಮರ್ಥ ತಂತ್ರಗಳನ್ನು ರೂಪಿಸಿ ಪಕ್ಷವನ್ನು ಬೆಳೆಸುವಂತೆ ಸಲಹೆ ನೀಡಿದರು.