ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ನಾನು, ಹಾಗಾಗಿ ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಹೇಳಿಕೆ ನೀಡುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈತರ ಬಗ್ಗೆ ಒಳಗೊಂದು ಹೊರಗೊಂದು ನಿಲುವು ತಳೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡುವ ಮುಖ್ಯಮಂತ್ರಿಗಳು, ರೈತರು ನೇರವಾಗಿ ತನ್ನ ಬಳಿ ಬರಲಿ ಸಮಸ್ಯೆ ಬಗೆಬರಿಸುವೆ ಎಂದು ಹೇಳುತ್ತಾರೆ. ಇನ್ನೊಂದೆಡೆ ಸರ್ಕಾರ ರೈತರನ್ನು ಏಕಾಏಕಿ ಬಂಧಿಸುತ್ತದೆ ಎಂದು ದೂರಿದರು.
ಅಲ್ಲದೇ ಬಳ್ಳಾರಿ ವಿಮಾನ ನಿಲ್ದಾಣ ಭೂಸ್ವಾಧೀನ ವಿಷಯದಲ್ಲೂ ಸಹ ಸದನಕ್ಕೆ ತಪ್ಪು ಮಾಹಿತಿಗಳನ್ನು ನೀಡಿರುವ ಸಚಿವ ಜನಾರ್ದನ ರೆಡ್ಡಿ ಸದನದ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿದರು. ಭೂಸ್ವಾಧೀನಕ್ಕೆ ಯಾವುದೇ ರೈತರ ವಿರೋಧವಿಲ್ಲ ಎಂದು ಸದನದಲ್ಲಿ ಹೇಳಿಕೆ ನೀಡುವ ಸಂದರ್ಭದಲ್ಲೇ ಬಳ್ಳಾರಿಯಲ್ಲಿ 60ಕುಟುಂಬಗಳು ಪ್ರತಿಭಟನೆ ನಡೆಸುತ್ತಿದ್ದವು ಎಂದರು.