ಬಿಬಿಎಂಪಿ: ಕದ್ದುಮುಚ್ಚಿ ಬಿ ಫಾರಂ ನೀಡಿದ ಬಿಜೆಪಿ, ಕಾಂಗ್ರೆಸ್ !
ಬೆಂಗಳೂರು, ಸೋಮವಾರ, 15 ಮಾರ್ಚ್ 2010( 16:38 IST )
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಸೋಮವಾರ ಭರಾಟೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಆದರೆ ವಿಶೇಷ ಏನಪ್ಪಾ ಅಂದ್ರೆ, ಪ್ರತಿವಾರ್ಡ್‌ಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದರಿಂದ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಸುಮಾರು 40ಅಭ್ಯರ್ಥಿಗಳಿಗೆ ಕದ್ದುಮುಚ್ಚಿ ಬಿ ಫಾರಂ ನೀಡಿದೆ. ಹಾಗಾಗಿ ಇಂದು ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು ಯಾರೆಂಬುದು ನಿಗೂಢವಾಗಿದೆ!.
ಪ್ರತಿಭಟನೆ, ವಿರೋಧದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೂಡ ಕದ್ದುಮುಚ್ಚಿ ಬಿ ಫಾರಂ ನೀಡಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ತಮಗೆ ಟಿಕೆಟ್ ಸಿಗುವುದು ಕೈತಪ್ಪಿ ಹೋಗಿರುವುದು ಖಚಿತವಾಗುತ್ತಿದ್ದಂತೆಯೇ ಆಕ್ರೋಶಗೊಂಡ ಅತೃಪ್ತರ ಗುಂಪು ಪಕ್ಷದ ವರಿಷ್ಠರ ಮೇಲೆ ರೇಗಾಡಿ, ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡದೆ ಇರುವುದನ್ನು ಖಂಡಿಸಿದ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆ ಕ್ಷಣದವರೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸದೆ ನೇರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ್ದು, ಟಿಕೆಟ್ ವಂಚಿತರನ್ನು ಕೆರಳಿಸಿತ್ತು.