ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ಇಸ್ರೋ ಕೇಂದ್ರದ ಬಳಿ ಭದ್ರತಾ ಸಿಬ್ಬಂದಿ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಆದರೆ ಇದು ಭಯೋತ್ಪಾದನಾ ದಾಳಿಯಲ್ಲ ಎಂದು ಇಸ್ರೋ ಕೇಂದ್ರ ತಕ್ಷಣವೇ ಸ್ಪಷ್ಟನೆ ನೀಡಿದೆ.
ಇಸ್ರೋ ಬ್ಯಾಲಾಳು ಘಟಕದ ಬಳಿ ಶೂಟೌಟ್ ನಡೆದಿರುವುದು ಹೌದು. ಇಲ್ಲಿ ಯಾವುದೇ ರೀತಿಯ ಭದ್ರತಾ ವೈಫಲ್ಯ ಆಗಿಲ್ಲ. ನಮ್ಮ ಭದ್ರತಾ ಸಿಬ್ಬಂದಿಗಳು ದಾಳಿಕೋರರ ಮೇಲೆ ಪ್ರತಿದಾಳಿ ನಡೆಸಿ ಹಿಮ್ಮೆಟ್ಟಿಸಿದ್ದಾರೆ ಎಂದು ಇಸ್ರೋ ವಕ್ತಾರ ಎಸ್. ಸತೀಶ್ ತಿಳಿಸಿದ್ದಾರೆ.
ಇಂದು ಮುಂಜಾನೆ 3.30ರ ಹೊತ್ತಿಗೆ ಈ ಘಟನೆ ನಡೆದಿದ್ದು, ಸಿಐಎಸ್ಎಫ್ ಸಿಬ್ಬಂದಿಗಳ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದರು. ಭದ್ರತಾ ಸಿಬ್ಬಂದಿಗಳು ತಿರುಗಿ ಬಿದ್ದಾಗ ಪರಾರಿಯಾಗಿದ್ದಾರೆ.
ಮೂಲಗಳ ಪ್ರಕಾರ ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಇಸ್ರೋ ಆವರಣದ ಸಮೀಪ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದರು. ಅವರ ಹತ್ತಿರ ಹೋದ ಭದ್ರತಾ ಸಿಬ್ಬಂದಿಯೊಬ್ಬ ವಿಚಾರಣೆ ನಡೆಸಲು ಆರಂಭಿಸುತ್ತಿದ್ದಂತೆ ದುಷ್ಕರ್ಮಿಗಳು ತಮ್ಮಲ್ಲಿದ್ದ ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ.
ನಂತರ ತನ್ನ ನಿಲುವನ್ನು ಬದಲಿಸಿದ ಭದ್ರತಾ ಸಿಬ್ಬಂದಿ ಮತ್ತಷ್ಟು ಸುತ್ತುಗಳ ಗುಂಡು ಹಾರಾಟ ನಡೆಸಿದ್ದಾನೆ. ಉಳಿದ ಸಿಬ್ಬಂದಿಗಳು ಸ್ಥಳಕ್ಕೆ ಬರುವುದರೊಳಗೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸುಮಾರು 15 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಒಟ್ಟಾರೆ ಎಂಟು ಸುತ್ತು ಗುಂಡು ಹಾರಾಟ ನಡೆದಿದೆ. ದುಷ್ಕರ್ಮಿಗಳ ಉದ್ದೇಶ ಇಸ್ರೋ ಕೇಂದ್ರದ ಒಳಗಿದ್ದ ಚಂದ್ರಯಾನದ ಡಿಶ್ ಆಂಟೆನಾವನ್ನು ನಾಶ ಅಥವಾ ಹಾನಿ ಮಾಡುವುದಾಗಿತ್ತು ಎಂದು ವರದಿಗಳು ಹೇಳಿವೆ.
ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ದುಷ್ಕೃತ್ಯದ ಹಿಂದೆ ಯಾರಿದ್ದಾರೆ, ಇದು ಭಯೋತ್ಪಾದನಾ ಕೃತ್ಯವೇ ಎಂಬುದರ ಕುರಿತು ತನಿಖೆ ನಡೆಸಲಿದ್ದಾರೆ. ಶೀಘ್ರದಲ್ಲೇ ಈ ಕುರಿತು ಇಸ್ರೋ ಕೇಂದ್ರ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಗಳಿವೆ.
ಭಯೋತ್ಪಾದಕರ ಟಾರ್ಗೆಟ್ ಪಟ್ಟಿಯಲ್ಲಿ ಇಸ್ರೋ ಪ್ರಮುಖ ಸ್ಥಾನವನ್ನು ಪಡೆದಿದೆ ಎಂಬ ಬೇಹುಗಾರಿಕಾ ವರದಿಗಳ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳ ಹಿಂದೆಯೇ ಕೇಂದ್ರ ಗೃಹ ಸಚಿವಾಲಯವು ಕಟ್ಟೆಚ್ಚರ ರವಾನಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.