ಬಿಜೆಪಿಗೆ ಮುಖಭಂಗ: ಮೈಸೂರು ಪಾಲಿಕೆ ಮೇಯರ್‌ಗಿರಿ ಜೆಡಿಎಸ್‌ಗೆ
ಮೈಸೂರು, ಗುರುವಾರ, 22 ಏಪ್ರಿಲ್ 2010( 17:28 IST )
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮತ್ತೆ ಫಲ ನೀಡಿದ್ದು, ಅರಮನೆ ನಗರಿ ಮೈಸೂರು ಪಾಲಿಕೆಯ ಮೇಯರ್ ಗಿರಿ ಜೆಡಿಎಸ್‌ಗೆ ಒಲಿಯುವ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಗುರುವಾರ ನಡೆದ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ನ ಸಂದೇಶ್ ಸ್ವಾಮಿ ಮೇಯರ್ ಆಗಿ ಹಾಗೂ ಕಾಂಗ್ರೆಸ್‌ನ ಪುಷ್ಪಲತಾ ಅವರು ಉಪಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.
ಫೆಬ್ರುವರಿ 26ರಂದು ರದ್ದುಗೊಂಡಿದ್ದ ಮೇಯರ್ ಚುನಾವಣೆ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಇಂದು ಮೈಸೂರು ಪಾಲಿಕೆಯ ಮೇಯರ್ ಚುನಾವಣೆ ನಡೆದಿತ್ತು.
ಮೈಸೂರು ಪಾಲಿಕೆಯ ಮೇಯರ್ ಹುದ್ದೆಯನ್ನು ಪಡೆಯಬೇಕೆಂದು ಬಿಜೆಪಿ ಆಪರೇಶನ್ ಕಮಲ ನಡೆಸಿದ್ದರೂ ಕೂಡ ಜೆಡಿಎಸ್‌ನ ಸಂದೇಶ್ ಸ್ವಾಮಿ ಅವರು 37ಮತ ಪಡೆಯುವ ಮೂಲಕ ಜಯಭೇರಿ ಬಾರಿಸಿ ಗೆಲುವು ಸಾಧಿಸಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ನಾಗೇಂದ್ರ ಅವರು 30ಮತ ಪಡೆದು ಸೋಲನ್ನನುಭವಿಸಿದ್ದಾರೆ.
ಕಳೆದ ಬಾರಿ 34ಸದಸ್ಯರ ಬೆಂಬಲ ಪಡೆದಿದ್ದ ಬಿಜೆಪಿ ಈ ಬಾರಿ ಮುಖಭಂಗ ಅನುಭವಿಸಿದಂತಾಗಿದೆ. ಪಕ್ಷಾಂತರಗೊಂಡಿದ್ದ ಜೆಡಿಎಸ್‌ನ 7 ಸದಸ್ಯರಿಗೆ ಪ್ರಾದೇಶಿಕ ಆಯುಕ್ತರು ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರಿಂದ ಇಂದಿನ ಚುನಾವಣೆ ವಿಚಿತ್ರ ತಿರುವು ಪಡೆದು ಜೆಡಿಎಸ್ ಕೈ ಮೇಲಾಯಿತು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಮೇಯರ್ ಮತ್ತು ಉಪಮೇಯರ್ ಆಯ್ಕೆ ಸುಗಮಗೊಳಿಸಿಕೊಂಡವು. ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ರುಕ್ಮಿಣಿ, ಮಹದೇವಮ್ಮ ಮತ್ತು ಸುನಂದಾ ಪಾಲನೇತ್ರಾಗೆ ಒಂದೂ ಮತ ಬೀಳಲಿಲ್ಲ.