ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾದ ಪ್ರಿಯಕೃಷ್ಣ ಹಾಗೂ ಅವರ ತಂದೆ ಕೃಷ್ಣಪ್ಪ ಅವರು ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದ ಪರಿಣಾಮ ನಾಯಂಡನ ಹಳ್ಳಿ ಕಾಂಗ್ರೆಸ್ ಮುಖಂಡರೊಬ್ಬರಿಗೆ ಕೆಪಿಸಿಸಿ ಕಚೇರಿ ಹೊರಭಾಗದಲ್ಲಿಯೇ ಪ್ರಿಯಕೃಷ್ಣ ಅವರ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗುರುವಾರ ನಡೆದಿದೆ.
ಘಟನೆ ವಿವರ: ಕಾಂಗ್ರೆಸ್ ಮುಖಂಡ ಬಾಲರಾಜೇಗೌಡ ಅವರ ಪತ್ನಿ ಶಶಿ ಅವರು ನಾಯಂಡಹಳ್ಳಿ ವಾರ್ಡ್‌ನಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಶಾಸಕರಾದ ಪ್ರಿಯಕೃಷ್ಣ ಹಾಗೂ ಕೃಷ್ಣಪ್ಪ ಅವರು ಬೆಂಬಲ ನೀಡಿರಲಿಲ್ಲ ಎಂದು ಆರೋಪಿಸಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೂರು ನೀಡಲು ಆಗಮಿಸಿದ್ದ ವೇಳೆ ಪ್ರಿಯಕೃಷ್ಣ, ಕೃಷ್ಣಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.
ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ ಅವರ ವಿರುದ್ಧ ಘೋಷಣೆ ಕೂಗಿದ್ದರಿಂದ ನಾವು ಅವರ ಮೇಲೆ ಹಲ್ಲೆ ನಡೆಸಿದ್ದೇವೆ ಎಂಬ ವಿವರಣೆ ಕಾಂಗ್ರೆಸ್ ಕಾರ್ಯಕರ್ತರದ್ದು.
ಆದರೆ ಕೆಪಿಸಿಸಿ ಕಚೇರಿ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೊಯ್ ಕೈ ನಡೆಸುತ್ತಿದ್ದರೆ, ಮತ್ತೊಂದೆಡೆ ಸಭೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರಿಗೆ ಯಾವೊಂದು ವಿಚಾರವೂ ಗಮನಕ್ಕೆ ಬಂದಿಲ್ಲ. ಅಂತೂ ಹೊಡೆತ ತಿಂದ ಬಾಲರಾಜೇ ಗೌಡರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಮಗೇನೂ ಗೊತ್ತಿಲ್ಲ-ಪ್ರಿಯಕೃಷ್ಣ: ಬಾಲರಾಜೇ ಗೌಡರ ಮೇಲೆ ತಮ್ಮ ಬೆಂಬಲಿಗರು ಹಲ್ಲೆ ನಡೆಸಿರುವ ಬಗ್ಗೆ ತನಗೆ ಗೊತ್ತೇ ಇಲ್ಲಾ ಎಂದು ಶಾಸಕ ಪ್ರಿಯಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಬಾಲರಾಜೇ ಗೌಡರು ಕಾಂಗ್ರೆಸ್ ಕಾರ್ಯಕರ್ತರೇ ಅಲ್ಲ, ಸುಮ್ಮನೆ ಪತ್ನಿ ಚುನಾವಣೆಯಲ್ಲಿ ಪರಾಜಯಗೊಂಡಿದ್ದಾರೆಂದು ಹತಾಶೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಪ್ರಿಯಕೃಷ್ಣ-ಕೃಷ್ಣಪ್ಪ ಕಾರಣ?: ವಿಜಯನಗರ ಮತ್ತು ಗೋವಿಂದರಾಜ ನಗರದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಲು ಅಪ್ಪ-ಮಕ್ಕಳೇ ಕಾರಣ ಎಂಬುದು ಬಾಲರಾಜೇ ಗೌಡರ ಆರೋಪವಾಗಿದೆ. ಹಾಗಾಗಿಯೇ ಪಕ್ಷದ ಮುಖಂಡರಿಗೆ ದೂರು ನೀಡಲು ಕೆಪಿಸಿಸಿ ಸಭೆಗೆ ಆಗಮಿಸಿದ್ದ ವೇಳೆ ಅವರಿಬ್ಬರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂದು ದೂರಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ ವಿರುದ್ದ ಕಾಂಗ್ರೆಸ್ ಹೈಕಮಾಂಡ್‌ಗೂ ದೂರು ನೀಡಲಾಗಿದೆ ಎಂದ ಅವರು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಅವರ ಗಮನಕ್ಕೂ ತರಲಾಗಿದೆ ಎಂದರು.