ಕಾನೂನು ಬಾಹಿರವಾಗಿ ಡೊನೇಷನ್ ಸಂಗ್ರಹಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಗದಾಪ್ರಹಾರ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಲೋಕಾಯುಕ್ತರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.
ಈ ಬಗ್ಗೆ ವಿಷಯ ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಕಾಗೇರಿ, ಖಾಸಗಿ ಸಂಸ್ಥೆಗಳು ಅಭಿವೃದ್ದಿಯ ಹೆಸರಿನಲ್ಲಿ ಪಾಲಕರಿಂದ ಡೊನೇಷನ್ ಸಂಗ್ರಹಿಸುವುದನ್ನು ತಡೆಯಲು ಸರ್ಕಾರವೇ ಒಂದು ವಿಚಕ್ಷಣಾ ದಳವನ್ನು ರಚಿಸಲಿದೆ ಎಂದು ತಿಳಿಸಿದ್ದಾರೆ.
ಈ ವಿಚಕ್ಷಣಾ ದಳದಲ್ಲಿ ಶಿಕ್ಷಣ ಇಲಾಖೆ, ಸಹಕಾರ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳ ಪ್ರಮುಖರು ಇರುವರು. ಕಾಲಕಾಲಕ್ಕೆ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಪ್ರಸ್ತುತ ಸಮಾಜದಲ್ಲಿ ಶಿಕ್ಷಣ ನೀಡುವಂತಹ ಪವಿತ್ರ ಕೆಲಸ ಇವತ್ತು ವ್ಯಾಪಾರೀಕರಣವಾಗಿ ಬದಲಾಗಿದ್ದು, ಇದನ್ನು ಬದಲಿಸುವ ನಿಟ್ಟಿನಲ್ಲಿ ಲೋಕಾಯುಕ್ತರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.
ಈ ಬಗ್ಗೆ ತಾವು ಲೋಕಾಯುಕ್ತರಿಗೆ ಪತ್ರವೊಂದನ್ನು ಬರೆದು ಡೊನೇಷನ್ ಹಾವಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಸಹಕಾರ ನೀಡುವಂತೆ ಕೋರುವುದಾಗಿ ಅವರು ಹೇಳಿದ್ದಾರೆ.