'ಇದು ದೇವರ ಆಭರಣ ಅಲ್ಲಾ, ನನ್ನ ಸ್ವಂತದ್ದು...ಯಾವುದೇ ಕಾರಣಕ್ಕೂ ದೇವರಿಗೆ ಅಲಂಕರಿಸಲು ಆಭರಣ ಕೊಡಲ್ಲ...ಹೀಗೆ ಭಕ್ತರ ಕೋರಿಕೆಯನ್ನು ಸಾರಸಗಟಾಗಿ ತಳ್ಳಿಹಾಕಿ ಭಕ್ತರ ಅಸಮಾಧಾನಕ್ಕೆ ಕಾರಣರಾದವರು ಸಾಹಿತಿ, ವಿಶ್ವಹಿಂದೂ ಪರಿಷತ್ ಮುಖಂಡ ಏರ್ಯ ಲಕ್ಷ್ಮೀನಾರಾಯಣ ಆಳ್ವ!
ಏನಿದು ವಿವಾದ: ಬಂಟ್ವಾಳದ ಅಮ್ತಾಡಿಯ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಆಭರಣಗಳೆಲ್ಲಾ ಏರ್ಯ ಲಕ್ಷ್ಮೀನಾರಾಯಣ ಅವರ ಒಡೆತನದಲ್ಲಿದ್ದು, ಕಳೆದ ಸುಮಾರು 30ವರ್ಷಗಳಿಂದಲೂ ದೇವರ ಜಾತ್ರೆ ಸಂದರ್ಭದಲ್ಲಿ ಆಭರಣ ನೀಡಲು ನಿರಾಕರಿಸುತ್ತಲೇ ಬಂದಿದ್ದರು. ಅಲ್ಲದೇ ಕೆಲವು ವರ್ಷಗಳ ಕಾಲ ಜಾತ್ರೆ ಕೂಡ ನಿಂತು ಹೋಗಿತ್ತು. ಇದೀಗ ಐದು ವರ್ಷಗಳಿಂದ ದೈವಸ್ಥಾನದಲ್ಲಿ ಜಾತ್ರೆ ನಡೆಯುತ್ತ ಬಂದಿದೆ.
ಆ ನಿಟ್ಟಿನಲ್ಲಿ ಸಂಪ್ರದಾಯದಂತೆ ಏಪ್ರಿಲ್ 25ರಂದು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಜಾತ್ರೆ ನಿಗದಿಯಾಗಿರುವುದರಿಂದ ದೇವರ ಆಭರಣಗಳನ್ನು ಕೊಡುವಂತೆ ಏರ್ಯ ಅವರಲ್ಲಿ ಕೇಳಿದಾಗ, ಇಲ್ಲಾ ಅದು ದೇವರ ಆಭರಣ ಅಲ್ಲ. ಅವೆಲ್ಲಾ ನನ್ನ ಸ್ವಂತ ಆಭರಣ ಎಂದು ಹೇಳುವ ಮೂಲಕ ಉಡಾಫೆಯ ಮಾತನ್ನಾಡಿದ್ದಾರೆ.
ಒಟ್ಟಾರೆ ಬಲ್ಲಾಳರ ಕಾಲದಿಂದಲೂ ದೈವಸ್ಥಾನದ ಆಡಳಿತ ಆಳ್ವ ಕುಟುಂಬದವರೇ ನಡೆಸುತ್ತಾ ಬಂದಿದ್ದಾರೆ. ಇದು ಅರಸರ ಕಾಲದಲ್ಲಿ ದೈವಸ್ಥಾನದ ಚಿನ್ನಾಭರಣಗಳನ್ನು ಆಳ್ವ ಮನೆತನಕ್ಕೆ ಒಪ್ಪಿಸಲಾಗಿತ್ತು. ಆದರೆ ಆಳ್ವ ಮಾತ್ರ ಇದು ತನ್ನ ಸ್ವಂತ ಆಭರಣ ಎಂದು ಹೇಳಿ, ವಂಚಿಸಲು ಮುಂದಾಗಿದ್ದಾರೆ ಎಂಬುದು ಸ್ಥಳೀಯ ಭಕ್ತರ ಆಕ್ರೋಶವಾಗಿದೆ.
ದೇವರೇ ಆಳ್ವಗೆ ಬುದ್ಧಿ ಕೊಡಪ್ಪಾ: ಅಂತೂ ದೇವರ ಆಭರಣ ಕೊಡಿ ಎಂದು ದುಂಬಾಲು ಬಿದ್ದರೂ ಆಳ್ವ ಅವರು ತಮ್ಮ ಹಠ ಬಿಡದಿದ್ದ ಹಿನ್ನೆಲೆಯಲ್ಲಿ ದೈವಸ್ಥಾನದ ಭಕ್ತರು ಕೊನೆಗೆ ಪಂಜುರ್ಲಿ ದೈವದ ಮೊರೆ ಹೋಗಿ, ದೇವರೇ ನಿನ್ನ ಜಾತ್ರೆಗೆ ಆಭರಣವನ್ನು ಒಪ್ಪಿಸುವಂತೆ ಬುದ್ದಿ ಕೊಡಪ್ಪಾ ಎಂದು ಹರಕೆ ಹೊತ್ತಿದ್ದಾರಂತೆ!