ಬಂಧಿತ ಕಾಮಿ ಸ್ವಾಮಿ ನಿತ್ಯಾನಂದನನ್ನು ಗುರುವಾರ ಸಿಐಡಿ ಪೊಲೀಸರು ಬೆಂಗಳೂರಿಗೆ ಕರೆ ತಂದ ಸಂದರ್ಭದಲ್ಲಿ ಸ್ವಾಮಿಗೆ ಚಪ್ಪಲಿ ಎಸೆದ ಶಿಕ್ಷಕನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಶಿಮ್ಲಾದಲ್ಲಿ ಬಂಧಿಸಲ್ಪಟ್ಟ ನಿತ್ಯಾನಂದ ಸ್ವಾಮಿಯನ್ನು ನಿನ್ನೆ ರಾತ್ರಿ ವಿಮಾನದ ಮೂಲಕ ನಗರಕ್ಕೆ ಕರೆ ತರಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರು ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರೆ, ಮತ್ತೊಂದೆಡೆ ಪ್ರಚಾರದ ಹುಚ್ಚಿನಿಂದ ಶಿಕ್ಷಕ ಶ್ರೀನಿವಾಸ್ ಸ್ವಾಮಿ ಮೇಲೆ ಚಪ್ಪಲಿ ಎಸೆದು, ಬಾಯಿಗೆ ಬಂದಂತೆ ಬೈಗುಗಳ ಸುರಿಮಳೆ ಸುರಿಸಿದ್ದ.
ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕಾಗಿದ್ದ ಶಿಕ್ಷಕ ಪ್ರಚಾರ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಾಮಿಗೆ ಚಪ್ಪಲಿ ಎಸೆದು ಜೈಲು ಕಂಬಿ ಎಣಿಸುವಂತಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಕೆಳಮೇಗಲದೊಡ್ಡಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಶ್ರೀನಿವಾಸ್ ಶಾಂತ ಸ್ವಭಾವದವರು ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
ಆದರೆ ಶ್ರೀನಿವಾಸ್ ಅವರಿಗೆ ಪ್ರಚಾರದ ಹುಚ್ಚು ಹೆಚ್ಚು ಎನ್ನಲಾಗಿದೆ. ಚಿತ್ರನಟರೊಂದಿಗೆ ಫೋಟೋ ತೆಗೆಯಿಸಿಕೊಳ್ಳುವುದು ಕೂಡ ಶ್ರೀನಿವಾಸ್ ಗೀಳಾಗಿದೆ. ಅಂತೂ ನಿತ್ಯಾನಂದ ಸ್ವಾಮಿಗೆ ಚಪ್ಪಲಿ ಎಸೆದ ಮೇಸ್ಟ್ರು ಪೊಲೀಸರ ಅತಿಥಿಯಾಗಿ, ಜೈಲು ಕಂಬಿ ಎಣಿಸುವಂತಾಗಿದೆ.
ತುಂಬಾ ಒಳ್ಳೆಯವರು ನಮ್ಮ ಮೇಸ್ಟ್ರು: ಸ್ವಾಮಿಗೆ ಚಪ್ಪಲಿ ಎಸೆದು ಪೊಲೀಸರ ಅತಿಥಿಯಾಗಿರುವ ಶಿಕ್ಷಕ ಶ್ರೀನಿವಾಸ್‌ಗೆ ವಿದ್ಯಾರ್ಥಿಗಳು ಸಾಥ್ ನೀಡಿದ್ದು, ನಮ್ಮ ಮಾಸ್ಟ್ರು ತುಂಬಾ ಒಳ್ಳೆಯವರು. ಅವರು ಆಕಸ್ಮಿಕವಾಗಿ ಎಸೆದ ಚಪ್ಪಲಿ ಸ್ವಾಮಿಗೆ ಬಿದ್ದಿರುವುದಾಗಿ ವಿದ್ಯಾರ್ಥಿಗಳು ಸಮಜಾಯಿಷಿ ನೀಡಿದ್ದಾರೆ.