ಐಪಿಎಲ್ ಪಂದ್ಯಾವಳಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಪ್ರಕರಣದ ಕುರಿತಂತೆ ರಾಜ್ಯ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ, ಸಿಬಿಐ, ಐಪಿಎಲ್ ಹಾಗೂ ಕೆಎಸ್‌ಸಿಎಗೆ ನೋಟಿಸ್ ಜಾರಿ ಮಾಡಿದೆ.
ಐಪಿಎಲ್ ಪಂದ್ಯಾವಳಿಗಳ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಹಣ ಹೂಡಿದ್ದು, ವಿದೇಶಿ ವಿನಿಮಯವೂ ಸೇರಿದಂತೆ, ಭಾರೀ ಮೊತ್ತದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿಬಿಐ ತನಿಖೆಗೆ ಕೋರಿ ನ್ಯಾಯವಾದಿ ಎಸ್.ವಾಸುದೇವ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಂದು ಬೆಳಿಗ್ಗೆ ನ್ಯಾಯಮೂರ್ತಿ ಮಂಜುಳಾ ಚೆಲ್ಲರ್ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ಗಂಭೀರವಾಗಿ ಪರಿಶೀಲಿಸಿದ್ದು, ಈ ಕುರಿತು ಸಮಗ್ರ ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಿದೆ.
ಬಾಂಬ್ ಸ್ಫೋಟದ ನೆಪದಲ್ಲಿ ಐಪಿಎಲ್ ಸೆಮಿಫೈನಲ್ ಪಂದ್ಯಗಳನ್ನು ಮುಂಬೈಗೆ ಸ್ಥಳಾಂತರಿಸಿರುವ ಕ್ರಮವನ್ನು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಸೆಮಿ ಫೈನಲ್ ಈಗಾಗಲೇ ಪೂರ್ಣಗೊಂಡಿರುವ ನೆಲೆಯಲ್ಲಿ ಈ ಮನವಿಯನ್ನು ತಳ್ಳಿಹಾಕಿದ್ದರೂ ಹಣಕಾಸಿನ ದುರುಪಯೋಗ ವಿಚಾರವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತ್ತು.
ಐಪಿಎಲ್ ಪಂದ್ಯಾವಳಿಗಳಲ್ಲಿ ಕೇವಲ ದೇಶದ ಹಣವಷ್ಟೇ ಅಲ್ಲದೆ, ದುಬೈ ಹಾಗೂ ಇನ್ನಿತರ ದೇಶಗಳಿಂದ ಹಣ ತೊಡಗಿಸಿದ್ದು, ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.