ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುತ್ತಿರುವ ರೆಡ್ಡಿ ಸಹೋದರ ಸಚಿವರುಗಳ ಹಣಕಾಸು ವ್ಯವಹಾರ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಬುಧವಾರ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಗೌಡರು ಭೇಟಿಯಾಗಿದ್ದು, ರೆಡ್ಡಿ ಸಚಿವರುಗಳ ವಿರುದ್ಧ ತನಿಖೆ ನಡೆಸುವಂತೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ತಿಳಿಸಿದ್ದಾರೆ.
ರೆಡ್ಡಿ ಸಹೋದರರು ನಡೆಸುತ್ತಿರುವ ಅಕ್ರಮಗಳ ಕುರಿತು, ಅವರ ಭ್ರಷ್ಟಾಚಾರಗಳ ಕುರಿತು ಗೌಡರು ವಿಮರ್ಶೆ ನಡೆಸುತ್ತಿದ್ದಾರೆಂದೂ ದತ್ತಾ ತಿಳಿಸಿದ್ದಾರೆ.
ಕಳೆದ 10 ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ರೆಡ್ಡಿಗಳು ಹೇಗೆ ಆಗರ್ಭ ಶ್ರೀಮಂತರಾದರು ಎಂಬುದನ್ನು ಮುಖರ್ಜಿಯವರಿಗೆ ಗೌಡರು ವಿವರಿಸಿದ್ದಾರೆ. ರೆಡ್ಡಿಗಳ ಆದಾಯ ಮತ್ತು ಅವರು ಸಲ್ಲಿಸುತ್ತಿರುವ ತೆರಿಗೆಯ ಕುರಿತು ಸಚಿವಾಲಯ ತನಿಖೆ ನಡೆಸಬೇಕೆಂಬುದು ಗೌಡರ ಬಯಕೆಯಾಗಿತ್ತು. ಅದನ್ನು ಸಚಿವರೆದುರು ಹೇಳಿಕೊಂಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಆ ಮೂಲಗಳ ಪ್ರಕಾರ ಗೌಡರು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿ ಹಾಗೂ ಬಳ್ಳಾರಿ ಗಣಿಗಾರಿಕೆ ಕುರಿತ ನ್ಯಾಯಮೂರ್ತಿ ಕೆ.ಎ. ಸ್ವಾಮಿ ಮತ್ತು ಕೆ.ಎಲ್. ಮಂಜುನಾಥ್ ಅವರ ತೀರ್ಪುಗಳ ಪ್ರತಿಗಳನ್ನು ಹಸ್ತಾಂತರಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ರೆಡ್ಡಿಗಳಿಂದ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೂಡ ಅವರು ಬೆಟ್ಟು ಮಾಡಿ ತೋರಿಸಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಇತ್ತೀಚೆಗಷ್ಟೇ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಎಸ್.ಆರ್. ನಾಯಕ್ ನೀಡಿರುವ ಆದೇಶಗಳ ಪ್ರತಿಗಳನ್ನೂ ನೀಡಿದ್ದಾರೆ.
ಇಷ್ಟಕ್ಕೇ ಭೇಟಿಯನ್ನು ಮುಗಿಸದ ಗೌಡರು ರಾಜ್ಯ ಕಾಂಗ್ರೆಸ್ ಬಗ್ಗೆಯೂ ದೂರಿಕೊಂಡಿದ್ದಾರೆ. ಬಿಜೆಪಿ ಸಾಕಷ್ಟು ಅಕ್ರಮಗಳನ್ನು ಎಸಗುತ್ತಿದ್ದರೂ ಕಾಂಗ್ರೆಸ್ ರಾಜ್ಯದಲ್ಲಿ ಸಮರ್ಥ ಪ್ರಮುಖ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಅಸಮರ್ಥವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ನಡುವೆ ಗೌಡರು ಅಕ್ರಮ ಗಣಿಗಾರಿಕೆ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಬೇಕೆಂದು ಬಯಸಿ 30 ಟಿಡಿಪಿ ಸಂಸದರ ಜತೆ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.