ನಾಲ್ಕು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿರುವ ನಿತ್ಯಾನಂದ ನಿದ್ದೆ, ಧ್ಯಾನದ ನೆಪವೊಡ್ಡಿ ತನಿಖೆಗೆ ಅಸಹಕಾರ ನೀಡಿದ್ದು, ಶನಿವಾರ ತನಿಖೆಗೆ ಸಹಕಾರ ನೀಡಿದ್ದರೂ ಕೂಡ ಪೊಲೀಸರು ಕೊಟ್ಟ ಆಹಾರವನ್ನು ನಿರಾಕರಿಸಿ, ತನಗೆ ಆಶ್ರಮದ ಆಹಾರವೇ ಬೇಕೆಂದು ಹಠ ಹಿಡಿದಿದ್ದಾನೆ.
ಅಂತೂ ಕೊನೆಗೂ ಪೊಲೀಸರು ನೀಡಿದ ಆಹಾರ ಸೇವಿಸಲು ನಿರಾಕರಿಸಿದ ನಿತ್ಯಾನಂದ ಕೊನೆಗೆ ಹಾಲು, ಹಣ್ಣು-ಹಂಪಲು ತಿಂದು ದಿನ ಕಳೆದಿದ್ದಾನೆ.
ಶಿಮ್ಲಾದಲ್ಲಿ ಬಂಧಿತನಾಗಿದ್ದ ಕಾಮಿ ಸ್ವಾಮಿಯನ್ನು ರಾಜ್ಯ ಸಿಐಡಿ ಪೊಲೀಸರು ರಾಜ್ಯಕ್ಕೆ ಕರೆತಂದು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು,ಸ್ವಾಮಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.
ಆದರೆ ಆರಂಭದಿಂದಲೇ ಸ್ವಾಮಿ ಸಿಐಡಿ ಪೊಲೀಸರ ತನಿಖೆಗೆ ಸಹಕರಿಸದೆ ನಿದ್ದೆ, ಧ್ಯಾನದ ಮೊರೆ ಹೋಗುವ ಮೂಲಕ ಸತಾಯಿಸಿದ್ದ. ಆದರೂ ಪಟ್ಟು ಬಿಡದ ಅಧಿಕಾರಿಗಳು ಆತನ ನಿದ್ದೆಯ ನಡುವೆಯೇ ಹರಸಾಹಸ ಮಾಡಿ ವಿಚಾರಣೆ ನಡೆಸಿದ್ದರು.
ಏತನ್ಮಧ್ಯೆ ಅಧಿಕಾರಿಗಳ ತನಿಖೆಗೆ ತಕ್ಕಮಟ್ಟಿಗೆ ಸಹಕಾರ ನೀಡಿದ ಕಾಮಿ ಸ್ವಾಮಿ, ನಟಿಯರೊಂದಿಗಿನ ರಾಸಲೀಲೆ, ಎಲ್ಲಿ ಅಡಗಿದ್ದು, ಯಾರೆಲ್ಲರ ಜೊತೆ ರಾಸಲೀಲೆ ನಡೆಸಿದ್ದೀರಿ ಎಂಬ ಪ್ರಶ್ನೆ ಎದುರಾದಾಗ, ಅವೆಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಜಾರಿಕೊಳ್ಳುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಾಮಿಗೆ ಸರ್ಪಗಾವಲು: ಸಿಐಡಿ ಪೊಲೀಸರ ವಶದಲ್ಲಿರುವ ಕಾಮಿಸ್ವಾಮಿ ನಿತ್ಯಾನಂದ ಸ್ವಾಮಿಗೆ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ಆತನಿರುವ ಕೋಣೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಸಿಐಡಿ ಕೇಂದ್ರ ಕಚೇರಿಯ ನೆಲ ಮಹಡಿಯ ಕೋಣೆಯಲ್ಲಿ ನಿತ್ಯಾನಂದ ಸ್ವಾಮಿಯನ್ನು ಇರಿಸಲಾಗಿದ್ದು, ಆತನ ಕಾವಲಿಗೆ ಮೂರು ಪಾಳಯದಲ್ಲಿ ಡಿವೈಎಸ್ಪಿ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಅಲ್ಲದೇ ನಿತ್ಯಾನಂದನ ಚಲನವಲನ ಗಮನಿಸಲಾಗುತ್ತಿದೆ.
ನಿತ್ಯಾನಂದ ಸ್ವಾಮಿ ಇರುವ ಕೋಣೆಗೆ ಸಿಐಡಿ ಡಿಜಿಪಿ ಡಾ.ಗುರುಪ್ರಸಾದ್, ಎಸ್.ಪಿ.ಯೋಗಪ್ಪ ಸೇರಿದಂತೆ ಒಟ್ಟು ನಾಲ್ವರು ಅಧಿಕಾರಿಗಳನ್ನು ಬಿಟ್ಟರೆ ಇತರರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.