ಕಳೆದ ಮೂರು ದಿನಗಳಿಂದ ಸಿಐಡಿ ಪೊಲೀಸರ ವಶದಲ್ಲಿರುವ ಕಾಮಿಸ್ವಾಮಿ ನಿತ್ಯಾನಂದನನ್ನು ಸೋಮವಾರ ಸಂಜೆ ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹಾಜರುಪಡಿಸಲಾಗುವುದು ಎಂದು ರಾಸಲೀಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಹಿರಿಯ ಪೊಲೀಸರು ತಿಳಿಸಿದ್ದಾರೆ.
ನಗರದ ಅರಮನೆ ರಸ್ತೆ ಸಿಐಡಿ ಕೇಂದ್ರ ಕಚೇರಿಯಲ್ಲಿ ಪೊಲೀಸರ ಸರ್ಪಗಾವಲಿನಲ್ಲಿರುವ ನಿತ್ಯಾನಂದನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ 14ದಿನಗಳ ಕಾಲ ಕಸ್ಟಡಿಗೆ ಕೊಡಲು ಕೋರಲಾಗುವುದು ಎಂದು ವಿವರಿಸಿದ್ದಾರೆ.
ಸಿಐಡಿ ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೆ ನಿತ್ಯಾನಂದ ಸಕಾರಾತ್ಮಕವಾಗಿ ಉತ್ತರ ನೀಡಿದ್ದು, ತನಿಖೆಗೆ ಸಹಕರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನಿತ್ಯಾನಂದನ ಮೇಲೆ ರಾಮನಗರದಲ್ಲಿ ರೊಚ್ಚಿಗೆದ್ದ ಶಿಕ್ಷಕನೊಬ್ಬ ಚಪ್ಪಲಿ ಎಸೆದ ನಂತರ ಸಿಐಡಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಗೂ ಮೂರನೇ ದಿನವೂ ಪ್ರವೇಶ ನಿರ್ಬಂಧಿಸಲಾಗಿತ್ತು.