ನಟಿ ರಂಜಿತಾಳೊಂದಿಗಿನ ರಾಸಲೀಲೆ ಪ್ರಕರಣ ಬಯಲುಗೊಂಡು, ಈಗ ಪೊಲೀಸ್ ಅತಿಥಿಯಾಗಿರುವ ಕಾಮಿ ನಿತ್ಯಾನಂದ ಸ್ವಾಮಿ ವಿರುದ್ಧ ಕೇರಳದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಕೇರಳ ಪೊಲೀಸರ ತಂಡ ನಗರಕ್ಕೆ ಆಗಮಿಸಿದೆ.
ಕಳೆದ ನಾಲ್ಕು ದಿನಗಳಿಂದ ಸ್ವಾಮಿಯ ವಿಚಾರಣೆ ನಡೆಸಿ ಕೆಲ ಮಾಹಿತಿ ಸಂಗ್ರಹಿಸಿದ್ದರೂ, ಬಹುತೇಕ ಸಮಯ ಧ್ಯಾನದಲ್ಲಿ ಕಳೆಯುತ್ತಿರುವುದರಿಂದ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೇರಳ ಪೊಲೀಸರಿಗೆ ವಿಚಾರಣೆ ನಡೆಸಲು ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ.
ಅಲ್ಲದೆ, ನಾಲ್ಕು ದಿನಗಳ ವಿಚಾರಣೆಗೆ ನೀಡಿದ ಅವಕಾಶ ಸೋಮವಾರ ಕೊನೆಗೊಂಡಿದ್ದರಿಂದ ನಿತ್ಯಾನಂದ ಸ್ವಾಮಿಯನ್ನು ಮತ್ತೆ ರಾಮನಗರ ಕೋರ್ಟ್‌ಗೆ ಹಾಜರು ಪಡಿಸಿ ಮತ್ತಷ್ಟು ವಿಚಾರಣೆ ನಡೆಸಲು ಕಾಲಾವಕಾಶ ನೀಡುವಂತೆ ಪೊಲೀಸರು ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಸ್ವಾಮಿ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘಿಸಿ ವಿದೇಶಿ ಹಣ ಪಡೆದಿರುವ ಬಗ್ಗೆಯೂ ಇದೀಗ ಬಹಿರಂಗಗೊಂಡಿದೆ. ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿರುವ ಬ್ಯಾಂಕ್‌ವೊಂದರ ಮುಖಾಂತರ ವಿದೇಶಿಯರಿಂದ ವಂತಿಗೆಯನ್ನು ಭಾರತದಲ್ಲಿರುವ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.