ಗ್ರಾಮ ಪಂಚಾಯಿತಿಗಳಿಗೆ ಮೇ 8ರಂದು ನಡೆಯಲಿರುವ ಪ್ರಥಮ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರವೇ ಅಂತಿಮ ದಿನವಾಗಿದ್ದರಿಂದ, ಉತ್ಸಾಹಿ ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಭರಾಟೆ ನಡೆದಿತ್ತು.
ಗ್ರಾಮೀಣ ಭಾಗದಲ್ಲಿ ಚುನಾವಣೆ ಕಾವು ಏರಿದ್ದು, ಚುನಾವಣಾ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದ ಸಾವಿರಾರು ಉಮೇದುವಾರರು ಇಂದು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಮೊದಲ ಹಂತದ ಚುನಾವಣೆ ಮೇ 8ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಬೀದರ್, ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.
ಈ ಚುನಾವಣೆ ರಾಜಕೀಯ ಪಕ್ಷಗಳ ಚಿನ್ನೆಗಳ ಆಧಾರದಲ್ಲಿ ನಡೆಯದೇ ಇರುವುದರಿಂದ, ವಿವಿಧ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣಾಧಿಕಾರಿ ಕಚೇರಿಗಳಿಗೆ ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಮೇ 12ರಂದು 2ನೇ ಹಂತದ ಚುನಾವಣೆ ನಡೆಯಲಿದ್ದು, ಅಂದು 2,833 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ.