ಪ್ರವರ್ಗ 2ಎನಲ್ಲಿ ಲಿಂಗಾಯಿತ ಸಾದರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಯಾವುದೇ ಹೊಸ ಆದೇಶವನ್ನು ಹೊರಡಿಸಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ ತಿಳಿಸಿದ್ದಾರೆ.
ಸರ್ಕಾರ 2002ರ ಮಾರ್ಚ್ 30ರಂದು ಹೊರಡಿಸಿರುವ ಆದೇಶದಂತೆ 2ಎ ಪ್ರವರ್ಗದಲ್ಲಿ ಹಿಂದು ಸಾದರ, ಸಾದರ ಮತ, ಸಾದುಕುಲ, ಸಾದು ಗೌಡರ ಇವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಹೇಳಲಾಗಿದೆಯೇ ಹೊರತು, ಲಿಂಗಾಯಿತ ಸಾದರಿಗೆ ಮೀಸಲಾತಿ ನೀಡಿ ಎಂದು ಹೇಳಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.
ಈ ಪ್ರವರ್ಗದ ಮೀಸಲಾತಿ ಬಗ್ಗೆ ಕೆಲ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೇಳಿದ್ದರು. ಅದರಂತೆ 2002ರ ಸರ್ಕಾರಿ ಆದೇಶ ಪಾಲಿಸುವಂತೆ ಅಧಿಕಾರಿ ತಹಸೀಲ್ದಾರ್‌ಗಳಿಗೆ ಸೂಚಿಸಿದ್ದೇನೆಯೇ ಹೊರತು ಇಂತಹವರಿಗೆ ಮೀಸಲಾತಿ ನೀಡಿ, ಇಂತವಹರಿಗೆ ನೀಡಬೇಡಿ ಎಂದು ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ಸ್ಪಷ್ಟನೆಯನ್ನೇ ಕೆಲವರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವುದು ಸರಿಯಲ್ಲ ಎಂದ ಅವರು, ಸರ್ಕಾರಿ ಆದೇಶದಂತೆ ಮೀಸಲಾತಿ ಸೌಲಭ್ಯವನ್ನು 2ಎ ವರ್ಗದ ಅಡಿಯಲ್ಲಿ ಬರುವ ಜಾತಿಗಳಿಗೆ ಕಲ್ಪಿಸಲಾಗಿದೆ ಎಂದರು.